ನವದೆಹಲಿ, ಅ. 10 (DaijiworldNews/MB) : ಉತ್ತರ ಪ್ರದೇಶದ ಹತ್ರಸ್ ಮತ್ತು ಇತರ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಇತ್ತೀಚಿಗೆ ನಡೆದಿರುವ ಅಪರಾಧಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಯೊಂದನ್ನು ಹೊರಡಿಸಿದ್ದು ಇಂತಹ ಪ್ರಕರಣಗಳ ವಿರುದ್ದ ಕಡ್ಡಾಯ ಕ್ರಮಕೈಗೊಳ್ಳುವಂತೆ ಹಾಗೂ ಕಡ್ಡಾಯವಾಗಿ ಎಫ್ಐಆರ್ ದಾಖಲು ಮಾಡುವಂತೆ ತಿಳಿಸಿದೆ.
ಮಹಿಳೆಯರ ಮೇಲಿನ ಅಪರಾಧದ ವಿರುದ್ದ ಕಡ್ಡಾಯ ಕ್ರಮ ಕೈಗೊಳ್ಳುವಲ್ಲಿ ಪೊಲೀಸರ ಕಡೆಯಿಂದ ಯಾವುದೇ ವೈಫಲ್ಯ, ದೋಷ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಎಚ್ಚರಿಕೆ ನೀಡಿದೆ.
ಪೊಲೀಸ್ ಠಾಣೆಯ ವ್ಯಾಪ್ತಿಯ ಹೊರಗೆ ಮಹಿಳೆಯ ಮೇಲೆ ಲೈಂಗಿಕ ಹಲ್ಲೆಯಂತಹ ಅಪರಾಧ ಕೃತ್ಯಗಳು ನಡೆದಿದ್ದರೂ ಸಹ ಪೊಲೀಸರು ಎಫ್ಐಆರ್ ಅಥವಾ ಶೂನ್ಯ ಎಫ್ಐಆರ್ ದಾಖಲಿಸಲು ಕೇಂದ್ರ ತಿಳಿಸಿದೆ.
ಉತ್ತರ ಪ್ರದೇಶದ ಹತ್ರಸ್ನಲ್ಲಿ 19 ವರ್ಷದ ದಲಿತ ಬಾಲಕಿಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದ ಕೆಲವು ದಿನಗಳ ಬಳಿಕ ಸಚಿವಾಲಯವು ಈ ಸಲಹೆಯನ್ನು ಹೊರಡಿಸಿದೆ.
ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಗಳಲ್ಲಿ ಎಫ್ಐಆರ್ ದಾಖಲಿಸುವುದು, ವಿಧಿವಿಜ್ಞಾನ ಪರೀಕ್ಷೆಗೆ ಸಾಕ್ಷಿಗಳ ಸಂಗ್ರಹ ಮತ್ತು ಲೈಂಗಿಕ ಹಲ್ಲೆ ಸಾಕ್ಷಿ ಸಂಗ್ರಹ ಕಿಟ್, ಎರಡು ತಿಂಗಳಲ್ಲಿ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಕೇಸಿನ ವಿಚಾರಣೆಯನ್ನು ಪೂರ್ಣಗೊಳಿಸುವುದು, ಪುನರಾವರ್ತಿತ ಲೈಂಗಿಕ ಅಪರಾಧಿಗಳ ಬಗ್ಗೆ ಮಾಹಿತಿ ಕಲೆಹಾಕಲು ರಾಷ್ಟ್ರೀಯ ದಾಖಲೆಗಳನ್ನು ಬಳಸುವುದು ಇತ್ಯಾದಿ ನಿಯಮಗಳನ್ನು ಪೊಲೀಸರು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ.
ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್ಐಆರ್ ದಾಖಲಿಸಿ ಅರಿವಿನ ಅಪರಾಧ ಎಂದಾದರೆ ಭಾರತೀಯ ದಂಡ ಸಂಹಿತೆ 1973ರ ಕ್ರಿಮಿನಲ್ ಕೋಡ್ ಸೆಕ್ಷನ್ 154ರ ಸಬ್ ಸೆಕ್ಷನ್ (1)ರಡಿ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದೆ.