ಮಂಡ್ಯ, ಅ. 10(DaijiworldNews/PY): ಇಡೀ ದೇಶದಲ್ಲೇ ನಮ್ಮ ಸಂಸ್ಕೃತಿಯ ಪರಂಪರೆಯನ್ನು ಉಳಿಸಿಕೊಂಡು ಬಂದವರು ರೈತರು. ಇದೇ ಮಣ್ಣಿನ ಮಕ್ಕಳು ನಮ್ಮ ಹಳ್ಳಿನ ಸೊಗಡನ್ನು ಕಾಪಾಡುತ್ತಿದ್ದಾರೆ. ಇಡೀ ಜಗತ್ತಿನಲ್ಲೇ ರೈತನಿಗೆ ಯಾವುದೇ ಜಾತಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ಮಂಡ್ಯದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ರೈತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮಣ್ಣಿನ ಮಕ್ಕಳು ಯವುದೇ ಕಾರ್ಖಾನೆ, ವ್ಯಾಪಾರ ನಿಂತರೂ ಕೂಡಾ ಅನ್ನ, ನೀರು ಕೊಟ್ಟು ಪ್ರಾಣ ಉಳಿಸುವ ಅನ್ನದಾತರು ಮಾಡುವ ಕೆಲಸ ಮಾತ್ರ ನಿಲ್ಲುವುದಿಲ್ಲ. ಇಂತಹ ರೈತರ ಸ್ಮರಣೆ ಮಾಡುವ ಸಲುವಾಗಿ ಈ ರೀತಿಯಾದ ಸಮಾವೇಶ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್, ಸೂರ್ಯನಿಗೂ, ಭೂಮಿಗೂ ಇರುವ ಸಂಬಂಧವನ್ನು ಉಳಿಸಿಕೊಂಡು ಬರುವ ಕಾರ್ಯವನ್ನು ಮಾಡುತ್ತಿದೆ. ನಾನು ಕೂಡಾ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವನು. ನಮಗೆ ಸ್ವಾಭಿಮಾನದ ಶಕ್ತಿಯ ಉಸಿರನ್ನು ನೀಡಿದವರು ಹಸಿರು ಶಾಲು ತೊಟ್ಟವರು. ಕಾಂಗ್ರೆಸ್ಗೆ ರೈತರೇ ಜೀವಾಳವಾಗಿದ್ದು, ಇದರಿಂದಾಗಿ ರೈತರಿಗೆ ನೆರವಾಗಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಕೊರೊನಾದ ಸಂದರ್ಭ ರೈತರ ನೆರವಿಗೆ ಯಾರೋಬ್ಬರೂ ಕೂಡಾ ಬಂದಿಲ್ಲ. ರೈತರ ಹೆಸರು ಹೇಳಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು ರೈತರ ಕಷ್ಟಕ್ಕೆ ಸ್ಪಂದನೆ ನೀಡಿಲ್ಲ. ಅವರು ಯಾಕೆ ಅಧಿಕಾರದಲ್ಲಿ ಇರಬೇಕು ಎಂದು ಕಿಡಿಕಾರಿದರು.