ಬೆಂಗಳೂರು, ಅ. 10 (DaijiworldNews/MB) : ಭೂ ಸುಧಾರಣಾ ಕಾಯಿದೆ ತಿದ್ದುಪಡಿ ವಿರುದ್ದವಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ದ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಹಗರಣದಲ್ಲಿ ನಿಮ್ಮ ಪಾಲೆಷ್ಟು ಮಿಸ್ಟರ್ ಯಡಿಯೂರಪ್ಪನವರೇ'' ಎಂದು ಪ್ರಶ್ನಿಸಿದ್ದಾರೆ.
''ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕೆಪಿಸಿಸಿ ವತಿಯಿಂದ ಮಂಡ್ಯದಲ್ಲಿ ಇಂದು ಆಯೋಜಿಸಿದ್ದ ರೈತ ಸಮ್ಮೇಳನದಲ್ಲಿ ಭಾಗವಹಿಸಿದ ಬಳಿಕ ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ನಾನು ರೈತ ಕುಟುಂಬದಲ್ಲೇ ಹುಟ್ಟಿದವನು. 1980 ರಿಂದ 83ರ ವರೆಗೆ ಮೈಸೂರು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಈ ನೆಲದ ರೈತರ ಬದುಕು-ಬವಣೆ, ಕಷ್ಟ-ಸುಖಗಳನ್ನು ಕಣ್ಣಾರೆ ಕಂಡಿದ್ದೇನೆ, ಅನುಭವಿಸಿದ್ದೇನೆ. ಹಾಗಾಗಿ ರೈತರ ಪರ ಸದಾ ನಿಲ್ಲುವ ಬದ್ಧತೆ ನನ್ನಲ್ಲಿದೆ'''' ಎಂದು ಹೇಳಿದ್ದಾರೆ.
''ನಾನು ಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲೇ ಮೊಟ್ಟ ಮೊದಲನೆ ಬಾರಿಗೆ ಕೃಷಿ ಬೆಲೆ ಆಯೋಗ ರಚನೆ ಮತ್ತು ಎಪಿಎಂಸಿ ಮಾರುಕಟ್ಟೆಗಳಲ್ಲಿ ಆನ್ಲೈನ್ ಪದ್ಧತಿ ಜಾರಿಗೊಳಿಸಿದೆ. ಕಬ್ಬು ಬೆಳೆಗಾರರು ನಷ್ಟಕ್ಕೀಡಾದಾಗ ಟನ್ಗೆ ತಲಾ ರೂ.300 ರಂತೆ ಸುಮಾರು ರೂ.1,800 ಕೋಟಿ ಬೆಂಬಲ ಬೆಲೆ ನೀಡಿ ಖರೀದಿಸಿದ್ದು ನಮ್ಮ ಸರ್ಕಾರ'' ಎಂದಿದ್ದಾರೆ.
''ಅಂದು ನಾವು ಕೃಷಿ ಉತ್ಪನ್ನ ಮಾರುಕಟ್ಟೆಗಳ ಆನ್ಲೈನ್ ಪದ್ಧತಿಯನ್ನು ಜಾರಿಗೊಳಿಸಿದಾಗ ಅದನ್ನು ಹೊಗಳಿ, ದೇಶದ ಇತರೆ ರಾಜ್ಯಗಳಿಗೂ ಅಳವಡಿಕೆ ಮಾಡುವಂತೆ ತನ್ನ ಬಜೆಟ್ನಲ್ಲೇ ಸಲಹೆ ನೀಡಿದ್ದ ಕೇಂದ್ರದ ಬಿಜೆಪಿ ಸರ್ಕಾರವೇ ಇಂದು ಎಪಿಎಂಸಿ ಗಳ ಬಾಗಿಲು ಮುಚ್ಚಲು ಹೊರಟಿರುವುದು ವಿಪರ್ಯಾಸವಲ್ಲವೇ?'' ಎಂದು ಆಶ್ಚರ್ಯ ಸೂಚಿಸಿದ್ದಾರೆ.
''ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಆದರೆ ರೈತರಿಂದ ಭೂಮಿಯನ್ನು ಕಸಿದು ಯಾರಿಗೆ ಕೊಡಲು ಹೊರಟಿದ್ದೀರಿ ಎಂಬುದನ್ನೂ ಜನರಿಗೆ ಹೇಳಬೇಕಲ್ಲವೇ ಮಿಸ್ಟರ್ ಬಿ ಎಸ್ ಯಡಿಯೂರಪ್ಪ ಅವರೇ?''
''ಭೂ ಸುಧಾರಣಾ ಕಾಯಿದೆಯ ಉಲ್ಲಂಘನೆ ಮಾಡಿ ಕೃಷಿ ಭೂಮಿ ಖರೀದಿಸಿರುವ 1814 ಪ್ರಕರಣಗಳು ನ್ಯಾಯಾಲಯದಲ್ಲಿವೆ, ಒಟ್ಟು ಭೂಮಿಯ ಮೌಲ್ಯ ಸುಮಾರು ರೂ.50,000 ಕೋಟಿ ಆಗಲಿದೆ. ಕಾಯ್ದೆ ತಿದ್ದುಪಡಿಯಿಂದ ಈ ಎಲ್ಲಾ ಪ್ರಕರಣಗಳು ರದ್ದಾಗುತ್ತದೆ. ಈ ಹಗರಣದಲ್ಲಿ ನಿಮ್ಮ ಪಾಲೆಷ್ಟು ಮಿಸ್ಟರ್ ಬಿ ಎಸ್ ಯಡಿಯೂರಪ್ಪ ಅವರೇ?'' ಎಂದು ಪ್ರಶ್ನಿಸಿದ್ದಾರೆ.
''ಧ್ವನಿ ಮತದ ಮೂಲಕ ಸಂಸತ್ತಿನಲ್ಲಿ ಮಸೂದೆ ಪಾಸಾದರೂ, ಅದನ್ನು ಜನರ ಧ್ವನಿ ಎದುರು ಗೆಲ್ಲಲು ಬಿಡಬಾರದು. ಈ ಹೋರಾಟದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗಿಯಾಗಬೇಕು. ನಾವು ಮಣ್ಣಿನ ಮಕ್ಕಳು ಅಂತ ಹೇಳಿ ಮನೆಯಲ್ಲಿ ಕೂತರೆ ಆಗಲ್ಲ, ಬೀದಿಗಿಳಿದರೆ ಮಾತ್ರ ಆಡಿದ ಮಾತಿಗೆ ಬೆಲೆ ಬರುತ್ತೆ'' ಎಂದಿದ್ದಾರೆ.