ಬೆಂಗಳೂರು, ಅ. 11 (DaijiworldNews/PY): ಕೃಷ್ಣಾ ನದಿ ನೀರಿನ ಹಂಚಿಕೆಯ ವಿಚಾರವಾಗಿ ನೂತನ ನ್ಯಾಯಮಂಡಳಿಯನ್ನು ನೇಮಕ ಮಾಡಬೇಕೆನ್ನುವ ತೆಲಂಗಾಣ ರಾಜ್ಯ ಸರ್ಕಾರದ ಬೇಡಿಕೆಯನ್ನು ತಿರಸ್ಕಾರ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.
ದೂರವಾಣಿ ಮೂಲಕ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರೊಂದಿಗೆ ಈ ವಿಚಾರವಾಗಿ ಚರ್ಚಿಸಲಾಗಿದೆ. ಕೃಷ್ಣಾ ನದಿ ಹಂಚಿಕೆ ವಿಚಾರವಾಗಿ 2013ರಲ್ಲೇ ನಿರ್ಧಾರ ಕೈಗೊಳ್ಳಲಾಗಿತ್ತು. ಅಲ್ಲದೇ, ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ನೀರು ಹಂಚಿಕೆಯಾಗಿದೆ. ಈ ತೀರ್ಪಿನ ಬಗ್ಗೆ ನ್ಯಾಯಮಂಡಳಿ ಜಾರಿಗೆ ಅಧಿಸೂಚನೆ ಹೊರಡಿಸಲು ತಯಾರಾದಾಗ ತೆಲಂಗಾಣ ಸರ್ಕಾರ ಮಧ್ಯಪ್ರವೇಶಿಸಿದೆ ಎಂದಿದ್ದಾರೆ.
ಇನ್ನು ಗೋವಾ ಸರ್ಕಾರವು ಮಹಾದಾಯಿ ನೀರಿನ ಉಪಯೋಗದ ಬಗ್ಗೆ ಕರ್ನಾಟಕ ವಿರುದ್ದ ಮಾಡಿರುವಂತ ಆರೋಪದಲ್ಲಿ ಯಾವುದೇ ರೀತಿಯಾದ ಸತ್ಯವಿಲ್ಲ ಎನ್ನುವ ಬಗ್ಗೆ ಕೇಂದ್ರ ಸಚಿವರಿಗೆ ತಿಳಿಸಲಾಗಿದೆ. ಅಲ್ಲದೇ, ಮಲಪ್ರಭಾ ನದಿಗೆ ಮಹಾದಾಯಿ ನೀರನ್ನು ಹರಿಸಲಾಗಿದೆ ಎನ್ನು ಸುಳ್ಳು ಆರೋಪದ ಬಗ್ಗೆ ಸಚಿವರಿಗೆ ಸ್ಪಷ್ಟನೆ ನೀಡಲಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಗೋವಾ ಸರ್ಕಾರದ ವಾದವನ್ನು ಮಾನ್ಯ ಮಾಡದಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.