ಮುಂಬೈ, ಅ. 11 (DaijiworldNews/MB) : ಟಿಆರ್ಪಿ ತಿರುಚುವಿಕೆ ಆರೋಪಗಳ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು ರಿಪಬ್ಲಿಕ್ ಟಿವಿ ಸಿಇಒ ಸೇರಿದಂತೆ ಆರು ಜನರಿಗೆ ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.
ಟಿಆರ್ಪಿ ಹಗರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಆರೋಪಿಗಳು
ಶನಿವಾರ ಈ ಸಮನ್ಸ್ ನೀಡಲಾಗಿದ್ದು ಭಾನುವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗಲು ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಕಂಚಂದಾನಿ, ಸಿಒಒಗಳಾದ ಹರ್ಷ್ ಭಂಡಾರಿ ಮತ್ತು ಪ್ರಿಯಾ ಮುಖರ್ಜಿ, ಚಾನೆಲ್ನ ಡಿಸ್ಟ್ರಿಬ್ಯೂಷನ್ ಹೆಡ್ ಘನಶ್ಯಾಮ್ ಸಿಂಗ್ ಹಾಗೂ ಹಂಸ ರಿಸರ್ಚ್ ಗ್ರೂಪ್ನ ಸಿಇಒ ಪ್ರವೀಣ್ ನಿಝಾರ, ಮತ್ತೊಬ್ಬ ಸಿಬ್ಬಂದಿಗೆ ಸಮನ್ಸ್ ನೀಡಲಾಗಿದ್ದು ಈ ವಿಚಾರಣೆಯೂ ಆರ್ಥಿಕ ಆಯಾಮಕ್ಕೆ ಸಂಬಂಧಿಸಿ ನಡೆಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಾನೆಲ್ನ ಡಿಸ್ಟ್ರಿಬ್ಯೂಷನ್ ಹೆಡ್ ಘನಶ್ಯಾಮ್ ಸಿಂಗ್ಗೆ ಎರಡನೇ ಬಾರಿಗೆ ಸಮನ್ಸ್ ನೀಡಲಾಗಿದೆ. ಇನ್ನು ಮುಂಬೈ ಪೊಲೀಸರಿಗೆ ಪತ್ರ ಬರೆದಿರುವ ರಿಪಬ್ಲಿಕ್ ಟಿವಿ ಸಿಎಫ್ಒ ಶಿವ ಸುಂದರಂ ಅಕ್ಟೋಬರ್ 14–15ರಂದು ತನಿಖೆಗೆ ಹಾಜರಾಗುತ್ತೇನೆ. ಈ ಪ್ರಕರಣದ ರಿಟ್ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುವವರೆಗೂ ತನಿಖೆ ಮುಂದುವರಿಸದಂತೆ ಮನವಿ ಮಾಡಿದ್ದಾರೆ.
ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನೆಮಾ ಚಾನೆಲ್ಗಳ ಮಾಲೀಕರು ಸೇರಿದಂತೆ ನಾಲ್ಕು ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದು ಶನಿವಾರ ಮ್ಯಾಡಿಸನ್ ವರ್ಲ್ಡ್ ಮತ್ತು ಮ್ಯಾಡಿಸನ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಸ್ಯಾಮ್ ಬಾಲ್ಸಾರ, ಬಾಕ್ಸ್ ಸಿನೆಮಾ ಮತ್ತು ಫಕ್ತ್ ಮರಾಠಿ ಟಿವಿಯ ಅಕೌಂಟೆಟ್ಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಪ್ರಸ್ತುತ ಟಿಆರ್ಪಿ ಲೆಕ್ಕಾಚಾರ ನಡೆಸುತ್ತಿರುವ ಬಾರ್ಕ್ ಸಂಸ್ಥೆಯು ಹಂಸ ರಿಸರ್ಚ್ ಗ್ರೂಪ್ ಪ್ರೈ.ಲಿ., ಮೂಲಕ ಟಿಆರ್ಪಿ ಹಗರಣದ ಸಂಬಂಧ ಪೊಲೀಸರಿಗೆ ದೂರು ದಾಖಲಿಸಿತ್ತು.
ಇನ್ನು ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ರಿಪಬ್ಲಿಕ್ ಟಿವಿ ಎಡಿಟರ್–ಇನ್–ಚೀಫ್ ಅರ್ನಬ್ ಗೋಸ್ವಾಮಿ, ''ಚಾನಲ್ನ ಹೆಸರನ್ನು ಎಫ್ಐಆರ್ನಲ್ಲಿ ನಮೂದಿಸಿಲ್ಲ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ವರದಿ ಮಾಡಿದ್ದಕ್ಕೆ ಚಾನೆಲ್ನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪೊಲೀಸರ ವಿರುದ್ದ ನಾವು ನ್ಯಾಯಾಲಯದಲ್ಲಿ ಹೋರಾಡುತ್ತೇವೆ'' ಎಂದು ಹೇಳಿದ್ದರು.