ನವದೆಹಲಿ, ಅ. 11 (DaijiworldNews/MB) : ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್ ನಾರಾಯಣ ಅವರ ಜನ್ಮ ದಿನಾಚರಣೆಯ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಜೆ.ಪಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜಯಂತಿಯಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಶೌರ್ಯದಿಂದ ಹೋರಾಡಿದರು. ನಮ್ಮ ಪ್ರಜಾಪ್ರಭುತ್ವ ಆಕ್ರಮಣಕ್ಕೊಳಗಾದಾಗ, ಅದನ್ನು ರಕ್ಷಿಸಲು ಅವರು ಬಲವಾದ ಜನಾಂದೋಲನವನ್ನು ನಡೆಸಿದರು. ಅವರಿಗೆ ರಾಷ್ಟ್ರೀಯ ಹಿತಾಸಕ್ತಿ ಮತ್ತು ಜನರ ಕಲ್ಯಾಣಕ್ಕಿಂತ ಬೇರೆ ಯಾವುದೂ ಪ್ರಮುಖವಾಗಿರಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಇಂದು ಭಾರತೀಯ ಜನಸಂಘ ಪಕ್ಷ ಮತ್ತು ಆರ್ಎಸ್ಎಸ್ನ ಹಿರಿಯ ನಾಯಕರಾದ ಚಂಡಿಕಾದಾಸ್ ಅಮೃತರಾವ್ (ನಾನಾಜಿ) ದೇಶಮುಖ್ ಅವರ ಜನ್ಮದಿನವಾಗಿದ್ದು ಅವರನ್ನು ಕೂಡಾ ಸ್ಮರಿಸಿರುವ ಪ್ರಧಾನಿ ಮೋದಿ, ಲೋಕನಾಯಕ ಜೆಪಿಯವರ ಅತ್ಯಂತ ಧರ್ಮನಿಷ್ಠ ಅನುಯಾಯಿಗಳಲ್ಲಿ ಒಬ್ಬರು ಮಹಾನ್ ನಾನಾಜಿ ದೇಶಮುಖ್. ಜೆಪಿಯ ಆಲೋಚನೆಗಳು ಮತ್ತು ಆದರ್ಶಗಳ ಪ್ರಚಾರಕ್ಕಾಗಿ ನಾನಾಜಿ ದಣಿವರಿವಿಲ್ಲದೆ ಕೆಲಸ ಮಾಡಿದರು. ಗ್ರಾಮೀಣಾಭಿವೃದ್ಧಿಗಾಗಿ ಅವರು ಮಾಡಿದ ಕಾರ್ಯಗಳು ನನ್ನನ್ನು ಪ್ರೇರೇಪಿಸುತ್ತದೆ. ಭಾರತ ರತ್ನ ನಾನಾಜಿ ದೇಶ್ಮುಖ್ ಅವರ ಜಯಂತಿಯಂದು ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.