ನವದೆಹಲಿ, ಅ. 11 (DaijiworldNews/PY): ಭಾರತದಲ್ಲಿ ಬ್ರಿಟಿಷ್ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸುವುದು ದುಸ್ತರವಾದ ಕೆಲಸ. ಇಂತಹ ಕೆಲಸವನ್ನು 18 ವರ್ಷದ ಯುವತಿಯೋರ್ವರು ನಿಭಾಯಿಸಿದ್ದಾರೆ.
ದೆಹಲಿಯ ಚೈತನ್ಯ ವೆಂಕಟೇಶ್ವರನ್ ಅವರು ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈಕಮೀಷನರ್ ಆಗುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇವರು ಬ್ರಿಟಿಷ್ ಹೈಕಮಿಷನರ್ ಹೊಣೆಯನ್ನು ಕಳೆದ ಬುಧವಾರದಂದು ನಿಭಾಯಿಸಿದ್ದರು.
2017ರಿಂದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಬ್ರಿಟಿಷ್ ಹೈಕಮಿಷನರ್ ಕಚೇರಿಯು 'ಹೈಕಮೀಷನರ್ ಫಾರ್ ಎ ಡೇ' ಎನ್ನುವ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು 18ರಿಂದ 23 ವರ್ಷದ ಯುವತಿಯರಿಗೆ ಅವಕಾಶವಿರುತ್ತದೆ.
ಚೈತನ್ಯ ಅವರು ಬ್ರಿಟನ್ನ ಉನ್ನತ ರಾಜತಾಂತ್ರಿಕರಾಗಿ ಹೈಕಮಿಷನ್ ವಿಭಾಗದ ಮುಖ್ಯಸ್ಥರಿಗೆ ಕಾರ್ಯಗಳನ್ನು ಹಸ್ತಾಂತರ ಮಾಡುವುದು, ಹಿರಿಯ ಮಹಿಳಾ ಪೊಲೀಸ್ ಅಧಿಕಾರಗಳೊಂದಿಗೆ ಸಂವಹನ ನಡೆಸುವುದು, ಪತ್ರಿಕಾ ಸಭೆ ಸೇರಿದಂತೆ ಮುಂತಾದ ಕೆಲಸಗಳನ್ನು ಇವರಿಗೆ ಒಂದು ದಿನದ ಮಟ್ಟಿಗೆ ನೀಡಲಾಗಿತ್ತು. ಈ ಎಲ್ಲಾ ಕಾರ್ಯವನ್ನು ಚೈತನ್ಯ ಸಮರ್ಥವಾಗಿ ನಿಭಾಯಿಸಿ, ಜಯಶಾಲಿಯಾಗಿದ್ದಾರೆ. ಅಲ್ಲದೇ, ಚೈತನ್ಯ ಈ ಅವಕಾಶವನ್ನು ಪಡೆದ ನಾಲ್ಕನೇ ಯುವತಿ ಎಂದು ಬ್ರಿಟಿಷ್ ಹೈಕಮಿಷನರ್ ಕಚೇರಿಯ ಹೇಳಿಕೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಚೈತನ್ಯ, ''ನಾನು ಚಿಕ್ಕವಳಿದ್ದಾಗ ಬ್ರಿಟಿಷ್ ಕೌನ್ಸಿಲ್ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದೆ. ಅಲ್ಲಿಯೇ ನನಗೆ ಕಲಿಯುವ ಆಸಕ್ತಿ ಹುಟ್ಟಿತು. ಅಲ್ಲಿ ಲಭಿಸಿದ ಜ್ಞಾನದಿಂದಾಗಿ ನನಗೆ ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈಕಮಿಷನರ್ ಆಗುವ ಅವಕಾಶ ಲಭಿಸಿದೆ'' ಎಂದಿದ್ದಾರೆ.