ಡಿಯೋರಿಯಾ, ಅ. 11 (DaijiworldNews/MB) : ಅತ್ಯಾಚಾರದ ಆರೋಪಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದನ್ನು ವಿರೋಧಿಸಿದ ಮಹಿಳಾ ಕಾರ್ಯಕರ್ತೆಗೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವಪಕ್ಷೀಯರೇ ಥಳಿಸಿದ್ದಾರೆ.
ಕಾಂಗ್ರೆಸ್ನ ಮಹಿಳಾ ಕಾರ್ಯಕರ್ತೆ ತಾರಾ ಯಾದವ್ಗೆ ಸ್ವಪಕ್ಷೀಯರೇ ಥಳಿಸಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾರಾ ಯಾದವ್ ಅವರು, ''ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅತ್ಯಾಚಾರಿ ಮುಕುಂದ್ ಭಾಸ್ಕರ್ ಅವರಿಗೆ ಟಿಕೆಟ್ ನೀಡುವ ಪಕ್ಷದ ನಿರ್ಧಾರವನ್ನು ನಾನು ಪ್ರಶ್ನಿಸಿದಾಗ ಪಕ್ಷದ ಕಾರ್ಯಕರ್ತರು ನನ್ನನ್ನು ಥಳಿಸಿದರು. ಈಗ, ಪ್ರಿಯಾಂಕಾ ಗಾಂಧಿ ಜಿ ಅವರು ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ನಾನು ಕಾಯುತ್ತಿದ್ದೇನೆ'' ಎಂದು ಹೇಳಿದ್ದಾರೆ.
ಇನ್ನು ಈ ಘಟನೆಯ ವಿರುದ್ದ ಖಂಡನೆ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ''ಅತ್ಯಾಚಾರ ಆರೋಪಿಗೆ ಟಿಕೆಟ್ ನೀಡುವುದನ್ನು ಮಹಿಳಾ ಕಾರ್ಯಕರ್ತೆ ಆಕ್ಷೇಪಿಸಿದಾಗ, ಡಿಯೋರಿಯಾದಲ್ಲಿ ಕಾಂಗ್ರೆಸ್ ಮುಖಂಡರು ತೀವ್ರವಾಗಿ ಥಳಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವು ಈ ವಿಷಯವನ್ನು ಗಣನೆಗೆ ತೆಗೆದುಕೊಂಡು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು'' ಎಂದು ಒತ್ತಾಯಿಸಿದ್ದಾರೆ.