ಲಖನೌ, ಅ. 11 (DaijiworldNews/MB) : ಉತ್ತರ ಪ್ರದೇಶದ ಹತ್ರಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಘಾಜಿಯಾಬಾದ್ ಎಸಿಬಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್ಐಆರ್ ದಾಖಲಿಸಿದೆ.
ಈ ಹಿಂದೆ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಉತ್ತರಪ್ರದೇಶ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಈ ಶಿಫಾರಸ್ಸನ್ನು ಅಂಗೀಕರಿಸಿರುವ ಕೇಂದ್ರ ತನಿಖಾ ಸಂಸ್ಥೆಯು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಪ್ರಕರಣವನ್ನು ವಹಿಸಿಕೊಂಡಿದೆ.
ದೆಹಲಿಯಲ್ಲಿ 2012ರಲ್ಲಿ ನಡೆದ ಭೀಕರ ನಿರ್ಭಯ ಸಾಮೂಹಿಕ ಅತ್ಯಾಚಾರವನ್ನು ನೆನಪಿಸುವಂತಹ ಉತ್ತರ ಪ್ರದೇಶದ ಹತ್ರಸ್ನಲ್ಲಿ ಸೆ. 14ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವು ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಯುವತಿಯನ್ನು ಜಮೀನಿನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದ ದುರುಳರು ಆಕೆಯ ದೇಹದ ಮೂಳೆಗಳು ಮುರಿಯುವಂತೆ, ನಾಲಗೆ ತುಂಡಾಗುವಂತೆ ಹಲ್ಲೆ ನಡೆಸಿದ್ದರು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ದೆಹಲಿಯ ಸಫ್ದಾರ್ ಜಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.