ನವದೆಹಲಿ, ಅ. 11 (DaijiworldNews/MB) : ''ಪ್ರಪಂಚದಲ್ಲಿಯೇ ಭಾರತೀಯ ಮುಸ್ಲಿಮರು ಅತ್ಯಂತ ಸಂತೋಷವಾಗಿದ್ದಾರೆ'' ಎಂಬ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಅವರು, ''ಮುಸ್ಲಿಮರ ಸಂತೋಷ ಯಾವ ಮಾನದಂಡದಲ್ಲಿ ಅಳೆಯಲಾಗುತ್ತದೆ'' ಎಂದು ಪ್ರಶ್ನಿಸಿದ್ದಾರೆ.
''ಮುಸ್ಲಿಮರ ಸಂತೋಷ ಯಾವ ಮಾನದಂಡದಲ್ಲಿ ಅಳೆಯಲಾಗುತ್ತದೆ? ಅತ್ಯಂತ ಸಂತೋಷವಾಗಿರಲು ನಾವು (ಮುಸ್ಲಿಮರು) ಇತರ ಮುಸ್ಲಿಂ ರಾಷ್ಟ್ರಗಳೊಂದಿಗೆ ಪೈಪೋಟಿ ನಡೆಸಲ್ಲ. ನಾವು ಬಹುಸಂಖ್ಯಾತ ಸಮುದಾಯದ ದಯೆnದಾಕ್ಷಿಣ್ಯವನ್ನು ಅವಲಂಬಿಸುವುದಿಲ್ಲ'' ಎಂದು ಹೇಳಿದ್ದಾರೆ.
''ನಮಗೆ ನಮ್ಮ ಮೂಲಭೂತ ಹಕ್ಕುಗಳು ಮುಖ್ಯ. ನಮ್ಮನ್ನು ಗೌರವಿಸುತ್ತಾರಾ ಎಂಬುದೇ ನಮ್ಮ ಸಂತೋಷವನ್ನು ಅಳೆಯಲಾಗುವ ಮಾನದಂಡ'' ಎಂದು ಹೇಳಿದ್ದಾರೆ.
''ನಿಮ್ಮ ಆರ್ಎಸ್ಎಸ್ನ ಸಿದ್ಧಾಂತಗಳ ಮೂಲಕ ದೇಶದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರೀಕರನ್ನಾಗಿಬೇಕೆಂದು ನೀವು ಅಂದುಕೊಂಡಿದ್ದೀರಾ? ದೇಶದ ಬಹುಸಂಖ್ಯಾತ ಸಮುದಾಯಗಳಿಗೆ ಮುಸ್ಲಿಮರು ಎಷ್ಟು ಕೃತಜ್ಞರಾಗಿರಬೇಕು ಎಂಬುದನ್ನು ನೀವು (ಭಾಗವತ್) ನಮಗೆ ಹೇಳುವ ಅಗತ್ಯವಿಲ್ಲ'' ಎಂದು ವಾಗ್ದಾಳಿ ನಡೆಸಿದ್ದಾರೆ.