ಮೈಸೂರು, ಅ. 12 (DaijiworldNews/MB) : ''ಹಿಂದೂ ಎಂಬುದು ಧರ್ಮವೇ ಅಲ್ಲ, ಅದು ಬ್ರಾಹ್ಮಣರು ಎಂದರ್ಥ'' ಎಂದು ಪ್ರೊ. ಕೆ ಎಸ್ ಭಗವಾನ್ ಹೇಳಿದ್ದಾರೆ.
ಈ ಹಿಂದೆ ಕೆಲವು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದ ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ''ಹಿಂದೂ ಎಂದರೆ ಬ್ರಾಹ್ಮಣರು ಎಂದರ್ಥ. ಗ್ರಾಮೀಣ ಜನರಿಗೆ ಈ ಹಿಂದೂವೆಂದರೆ ಏನೆಂದು ತಿಳಿದಿಲ್ಲ. ನೀವು ಯಾವ ಧರ್ಮ ಎಂದು ಕೇಳಿದರೆ ಒಕ್ಕಲಿಗ, ಕುರುಬ ಎಂದು ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ. ಹೀಗಿರುವಾಗ ಹಿಂದೂ ಪದವನ್ನು ತೆಗೆದು ಹಾಕಬೇಕು'' ಎಂದು ಹೇಳುವ ಮೂಲಕ ಮತ್ತೆ ವಿವಾದ ಸೃಷ್ಟಿಸಿದ್ದಾರೆ.
''ಹಿಂದೂ ಎಂಬ ಪದವನ್ನು ಮೊದಲು ಪರ್ಶಿಯನ್ನರು ಬಳಕೆ ಮಾಡಿದರು. ಅವರು ಸಿಂಧೂ ಎಂದು ಹೇಳುವ ಬದಲು ಹಿಂದೂ ಎಂದು ಹೇಳಿದರು. ಅವರು ತಪ್ಪಾಗಿ ಬಳಸಿದ ಪದವನ್ನು ನೀವು ಧರ್ಮದ ಹೆಸರಿಗೆ ಇಟ್ಟುಕೊಂಡಿದ್ದೀರಾ. ಮುಸ್ಲಿಮರನ್ನು ಕೊಳಕು ಎಂದು ಕರೆಯುವ ನೀವು ಅವರ ಬಾಯಿಯಿಂದ ಬಂದಿರುವ ಹಿಂದೂ ಪದವನ್ನೇ ನಿಮ್ಮ ಧರ್ಮಕ್ಕೆ ಇಟ್ಟುಕೊಂಡಿದ್ದೀರಿ. ನಿಮಗೆ ಮಾನ, ಮರ್ಯಾದೆ ಎಂಬುದು ಇದೆ ಎಂದಾದರೆ ಮೊದಲು ಈ ಹಿಂದೂ ಪದವನ್ನು ತೆಗೆದು ಹಾಕಿ'' ಎಂದು ಸವಾಲೆಸೆದಿದ್ದಾರೆ.
''ಉಪನಿಷದ್, ವೇದ ಮತ್ತು ಇತರೆ ಯಾವುದೇ ಪುರಾಣ ಗ್ರಂಥಗಳಲ್ಲಿ ಹಿಂದೂ ಧರ್ಮದ ಉಲ್ಲೇಖವಿಲ್ಲ. ಅಲ್ಲಿ ದೇಶದ ದೇಶದ ಪ್ರಮುಖ ಹಾಗೂ ಶ್ರೀಮಂತ ಧರ್ಮವಾದ ಬೌದ್ಧ ಧರ್ಮದ ಬಗ್ಗೆ ಉಲ್ಲೇಖವಿದೆ. ಹಿಂದೂ ಎಂದರೆ ಬ್ರಾಹ್ಮಣರು ಎಂದರ್ಥ ಉಳಿದವರೆಲ್ಲರೂ ಶೂದ್ರರು. ಮನುಸ್ಮೃತಿಯ ಪ್ರಕಾರ ಶೂದ್ರರೆಂದರೆ ವೇಶ್ಯೆಯರು ಎಂಬ ಉಲ್ಲೇಖವಿದೆ'' ಎಂದು ಹೇಳಿದರು.