ಬೆಂಗಳೂರು, ಅ. 12 (DaijiworldNews/MB) : ಖ್ಯಾತ ಸಂಗೀತ ನಿರ್ದೇಶಕ ರಾಜನ್ ಅವರು ಅನಾರೋಗ್ಯದಿಂದ ಭಾನುವಾರ ರಾತ್ರಿ 11 ಗಂಟೆಗೆ ಸ್ವಗೃಹದಲ್ಲಿ ನಿಧನರಾದರು.
85 ವರ್ಷದ ರಾಜನ್ ಅವರು ರಾಜನ್- ನಾಗೇಂದ್ರ ಸಹೋದರರ ಪೈಕಿ ಹಿರಿಯರಾಗಿದ್ದರು. ರಾಜನ್ ಅವರ ಹಿರಿಯ ಸಹೋದರ ನಾಗೇಂದ್ರ 2000ನೇ ಇಸವಿಯಲ್ಲಿ ನಿಧನರಾಗಿದ್ದರು.
ಮೈಸೂರಿನ ಶಿವರಾಂಪೇಟೆಯ ಮಧ್ಯಮ ವರ್ಗದ ಸಂಗೀತ ಕುಟುಂಬದಲ್ಲಿ ರಾಜನ್ ಮತ್ತು ನಾಗೇಂದ್ರ ಜನಿಸಿದರು. ಅವರ ತಂದೆ ರಾಜಪ್ಪ ಹಾರ್ಮೋನಿಯಂ ಮತ್ತು ಕೊಳಲು ವಾದಕರಾಗಿದ್ದರು. ಮೂಕ ಚಲನಚಿತ್ರಗಳಿಗೆ ಅವರು ಹಿನ್ನೆಲೆ ಸಂಗೀತ ನೀಡುತ್ತಿದ್ದರು.
ರಾಜನ್ ಮತ್ತು ನಾಗೇಂದ್ರ ಅವರು 1950, 1960, 1970, 1980 ಮತ್ತು 1990ರ ದಶಕದ ಮೆಲೋಡಿಕಿಂಗ್ ಎನಿಸಿಕೊಂಡಿದ್ದ ಸಂಗೀತ ಸಂಯೋಜಕರಾಗಿದ್ದು ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಈ ಜೋಡಿ ಕನ್ನಡದಲ್ಲಿಯೇ 200ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
ಹೆಬ್ಬಾಳದ ಚಿತಾಗಾರದಲ್ಲಿ ಸೋಮವಾರ ರಾಜನ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.