ನವದೆಹಲಿ, ಅ. 12 (DaijiworldNews/MB) : ''ಮೋದಿಗಾಗಿ ನಿಮ್ಮ ಮುಖ್ಯಮಂತ್ರಿಗಳು ನಿಮ್ಮ ಭವಿಷ್ಯವನ್ನು ಯಾಕೆ ಅಡವಿಡುತ್ತಿದ್ದಾರೆ'' ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿಯವರು ಜನರನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ದ ಮತ್ತೆ ವಾಗ್ದಾಳಿ ಮುಂದುವರೆಸಿರುವ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿ ಐದು ವಿಚಾರಗಳನ್ನು ಪಟ್ಟಿ ಮಾಡಿದ್ದಾರೆ.
''ಕೇಂದ್ರವು ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ಧನ ನೀಡುವ ಭರವಸೆ ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೊರೊನಾ ಕಾರಣದಿಂದಾಗಿ ಆರ್ಥಿಕತೆಯು ಚೂರುಚೂರಾಗಿದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಪ್ರಧಾನಿ ಮೋದಿ 1.4 ಲಕ್ಷ ಕೋಟಿ ತೆರಿಗೆ ವಿನಾಯತಿ ನೀಡುತ್ತಾರೆ ಹಾಗೂ 8,400 ಕೋಟಿಗಳ 2 ವಿಮಾನಗಳನ್ನು ಖರೀದಿಸುತ್ತಾರೆ. ಆದರೆ ರಾಜ್ಯಗಳಿಗೆ ಪಾವತಿಸಲು ಕೇಂದ್ರದ ಬಳಿ ಹಣವಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಗಳು ಸಾಲ ಪಡೆಯಲು ಹೇಳುತ್ತಾರೆ'' ಎಂಬ ಐದು ಅಂಶಗಳನ್ನು ಪಟ್ಟಿ ಮಾಡಿರುವ ರಾಹುಲ್ ಗಾಂಧಿಯವರು, ''ಮೋದಿಗಾಗಿ ನಿಮ್ಮ ಮುಖ್ಯಮಂತ್ರಿಗಳು ನಿಮ್ಮ ಭವಿಷ್ಯವನ್ನು ಯಾಕೆ ಅಡವಿಡುತ್ತಿದ್ದಾರೆ'' ಎಂದು ಜನರಲ್ಲಿ ಪ್ರಶ್ನಿಸಿದ್ದಾರೆ.