ಚೆನ್ನೈ, ಅ. 12 (DaijiworldNews/MB) : ಹಿರಿಯ ನಟಿ ಹಾಗೂ ಕಾಂಗ್ರೆಸ್ ನಾಯಕಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ಬಗ್ಗೆ ಖುಷ್ಬೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದು, "ಪಕ್ಷದಲ್ಲಿ ಉನ್ನತ ಮಟ್ಟದಲ್ಲಿರುವ ಕೆಲವು ಅಂಶಗಳು, ವಾಸ್ತವತೆ ಅಥವಾ ಸಾರ್ವಜನಿಕ ಮಾನ್ಯತೆಯೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ" ಎಂದು ಹೇಳಿದ್ದಾರೆ.
ಪಕ್ಷದಲ್ಲಿನ ಕೆಲವು ಬೆಳವಣಿಗೆಗಳು ಮತ್ತು ಪ್ರಾಮಾಣಿಕವಾಗಿ ಅಲ್ಲಿ ದುಡಿಯಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಹಲವು ಬಾರಿ ಯೋಚಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಖುಷ್ಬೂ ಹೇಳಿದ್ದಾರೆ.
ಇನ್ನು ಈ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವ ಖುಷ್ಬೂ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೂಡಾ ಕೇಳಿಬರುತ್ತಿದೆ. ಆದರೆ ಕಳೆದ ವಾರ ಖುಷ್ಬೂ ಅವರು ಬಿಜೆಪಿ ಸೇರ್ಪಡೆ ವಿಚಾರವನ್ನು ತಳ್ಳಿ ಹಾಕಿದ್ದರು. ಆದರೆ ಅವರು ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.