ನವದೆಹಲಿ, ಅ. 12 (DaijiworldNews/PY): ಭಾರತ-ಚೀನಾ ನಡುವಿನ ಪೂರ್ವ ಲಡಾಕ್ನಲ್ಲಿ ಸೇನೆ ನಿಯೋಜನೆ ಹಾಗೂ ಗಡಿ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ಕಾರ್ಪ್ಸ್ ಕಮಾಂಡರ್ ಸಭೆ ಸೋಮವಾರ ನಡೆಯಲಿದೆ.
ಆದರೆ, ಈ ಹಿಂದೆ ನಡೆದ ಸಭೆಯಲ್ಲಿ ಯಾವುದೇ ಬೆಳವಣಿಗೆ ಕಾಣದ ಹಿನ್ನೆಲೆ ಇಂದು ನಡೆವ ಸಭೆಯಲ್ಲಿ ಮಹತ್ವದ ಪ್ರಗತಿ ಕಾಣಬಹುದು ಎನ್ನುವ ಭರವಸೆ ನಮಗಿಲ್ಲ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಏಳನೇ ಸುತ್ತಿನ ಸಭೆ. ಹಿಂದಿನ ಸಭೆಗಳಲ್ಲಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಲಿಲ್ಲ. ಏಕೆಂದರೆ, ಚೀನಾವು ಭಾರತದ ಸೈನ್ಯವನ್ನು ದಕ್ಷಿಣ ದಂಡೆಯಾದ ಪಾಂಗೊಂಗ್ ತ್ಸೋ ಸರೋವರದಿಂದ ಸ್ಥಳಾಂತರಿಸಬೇಕು ಎನ್ನುವ ತೀರ್ಮಾನ ಮಾಡಿತ್ತು. ಈ ವಿಚಾರದಲ್ಲಿ ಉಭಯ ದೇಶಗಳು ಪರಸ್ಪರವಾದ ಸಂಧಾನಕ್ಕೆ ಬರಬೇಕಾಗಿತ್ತು. ಈ ಬಗ್ಗೆ ಎರಡು ದೇಶಗಳು ಒಪ್ಪಿಗೆ ನೀಡಿದ್ದಲ್ಲಿ ಮಾತ್ರವೇ ಸೇನೆಯ ನಿಲುಗಡೆ ಬಗ್ಗೆ ಮಾತುಕತೆಯನ್ನು ಮುಂದುವರೆಸಲು ಸಾಧ್ಯ ಎಂಬುದು ಭಾರತದ ನಿಲುವು.
ಇಂದು ನಡೆಯಲಿರುವ ಕಮಾಂಡರ್ ಮಟ್ಟದ ಸಭೆಯಲ್ಲಿ ಭಾರತೀಯ ಸೇನೆಯ ಲೇಹ್ ಮೂಲದ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಅವರ ಕೊನೆಯ ಸಭೆಯಾಗಿದೆ. ಮುಂದಿನ ಕಾರ್ಪ್ಸ್ ಕಮಾಂಡರ್ ಆಗಿ ನೇಮಕಗೊಂಡಿರುವ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಇಂದು ನಡೆಯುವ ಸಭೆಯಲ್ಲು ಭಾಗವಹಿಸಲಿದ್ದಾರೆ.