ಬೆಂಗಳೂರು, ಅ. 12 (DaijiworldNews/PY): ಆರೋಗ್ಯ ಇಲಾಖೆ ವಹಿಸಿಕೊಂಡು ಕೊರೊನಾ ನಿಯಂತ್ರಣ ಸೇರಿದಂತೆ ರಾಜ್ಯದ ಜನರಿಗೆ ಉತ್ತಮ ಆರೋಗ್ಯ ನೀಡುವ ಸಲುವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನನಗೆ ಸೂಚನೆ ನೀಡಿದ್ದಾರೆ ಎಂದು ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಎಂ ಬಿಎಸ್ವೈ ಅವರು ಸೂಚನೆ ನೀಡಿದಂತೆ ನಾನು ಪ್ರಾಮಾಣಿಕವಾಗಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ. ಸಿಎಂ ಅವರ ನಂಬಿಕೆ ಉಳಿಸುತ್ತೇನೆ. ಸಿಎಂ ಅವರಿಗೆ ಹಾಗೂ ಪಕ್ಷದ ಎಲ್ಲಾ ನಾಯಕರಿಗೂ ಕೂಡಾ ಧನ್ಯವಾದ ಎಂದಿದ್ದಾರೆ.
ಹೊಸ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಇಂದು ಮೈಸೂರಿನಲ್ಲಿ ಸಭೆ ಮಾಡಲಿದ್ದು, ದಸರಾ ಸಿದ್ದತೆಯ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲದೇ, ಒಂದು ವಾರದಿಂದ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಭೆ ನಡೆಸುತ್ತೇನೆ. ಇದರೊಂದಿಗೆ ಕೆಲವು ಆಸ್ಪತ್ರೆಗಳಿಗೂ ಭೇಟಿ ನೀಡಲಿದ್ದು, ಕೊರೊನಾ ನಿಯಂತ್ರಣ ಮಾಡವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಶ್ರೀರಾಮುಲು ಅವರೊಂದಿಗೆ ಮಾತನಾಡಿದ್ದೇನೆ. ಅವರಿಗೆ ಸಮಾಜ ಕಲ್ಯಾಣ ಇಲಾಖೆ ದೊರೆತಿದೆ. ಅವು ಈ ಮೊದಲು ಅದೇ ಇಲಾಖೆಯನ್ನು ಕೇಳಿದ್ದರು ಎಂದು ಕೇಳಿದ್ದೇನೆ. ಈ ಹಿನ್ನೆಲೆ ಅವರಿಗೆ ಈ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ತಿಳಿದಿದ್ದೇನೆ ಎಂದು ಹೇಳಿದ್ದಾರೆ.
ಸಿಎಂ ಅವರ ಆದೇಶ ಬಂದ ಕೂಡಲೇ ನಾಳೆಯೇ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮಾಡಲಿದ್ದೇನೆ. ಆರೋಗ್ಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲ. ಈ ವಿಚಾರವಾಗಿ ಸದನದಲ್ಲಿ ಮಾತನಾಡಿದ್ದೇನೆ. ಇಲಾಖೆ ಇನ್ನೂ ಕೂಡಾ ಚಾರ್ಜ್ ತೆಗೆದುಕೊಂಡಿಲ್ಲ. ಚಾರ್ಜ್ ಕೈಗೊಂಡ ತಕ್ಷಣ ಇಲಾಖೆ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಒಂದೇ. ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.