ಲಕ್ನೋ, ಅ. 12 (DaijiworldNews/PY): ಯುಪಿಯ ಗೊಂಡಾ ಜಿಲ್ಲೆಯ ದೇವಾಲಯದ ಅರ್ಚಕರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿರುವ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರು, ಸಂತನೇ ರಾಜ್ಯವಾಳುತ್ತಿರುವ ಉತ್ತರಪ್ರದೇಶದಲ್ಲಿ ಸಂತರಿಗೂ ರಕ್ಷಣೆಯಿಲ್ಲ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜಸ್ತಾನದಂತೆ, ಗೊಂಡ ಜಿಲ್ಲೆಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ದೇವಾಲಯದ ಅರ್ಚಕರ ಮೇಲೆ ಕಿಡಿಗೇಡಿಗಳು ನಡೆದಿರುವ ಹಲ್ಲೆ ಅತ್ಯಂತ ನಾಚಿಕೆಗೇಡಿನ ಸಂಗತಿ. ಸಂತ ಆಡಳಿತದಲ್ಲಿರುವ ಉತ್ತರಪ್ರದೇಶ ಸರ್ಕಾರದಲ್ಲಿ ಸಂತರು ಸುರಕ್ಷಿತವಾಗಿಲ್ಲ. ಕಾನೂನು ಹಾಗೂ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿದ್ದಾರೆ.
ಈ ವಿಷಯದ ಬಗ್ಗೆ ಎಲ್ಲಾ ಅಂಶಗಳನ್ನು ಗಂಭೀರವಾಗಿ ಗಮನಿಸಿದ ಬಳಿಕ ಅಪರಾಧಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಘಟನೆಗೆ ಸಂಬಂಧಿಸಿದ ಎಲ್ಲಾ ಭೂ ಮಾಫಿಯಾಗಳ ಅಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಬೇಕು. ಅಲ್ಲದೇ, ಸಾಧು-ಸಂತರಿಗೆ ಸುರಕ್ಷತೆ ಒದಗಿಸಬೇಕು ಎಂದು ಯುಪಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾನುವಾರ ಬೆಳಗ್ಗೆ ಅರ್ಚಕ ಅತುಲ್ ಬಾಬಾ ಅಲಿಯಾಸ್ ಸಾಮ್ರಾಟ್ ದಾಸ್ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಗಾಯಗೊಂಡ ಅವರನ್ನು ಲಖನೌದ ಕಿಂಜ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ಹೇಳಿದ್ದಾರೆ.