ನವದೆಹಲಿ,ಅ. 12 (DaijiworldNews/HR): ಕೊರೊನಾ ಸೋಂಕಿನಿಂದ ಉಂಟಾದ ಆರ್ಥಿಕ ಹೊಡೆತವನ್ನು ಸರಿದೂಗಿಸಲು ಸಣ್ಣ ಉದ್ಯಮಿಗಳಿಗೆ, ಬೀದಿಬದಿ ವ್ಯಾಪಾರಿಗಳಿಗೆ ಮಹಿಳೆಯರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಐದು ಕಂತುಗಳಲ್ಲಿ ಹಲವು ಯೋಜನೆ ಘೋಷಿಸಿದ್ದು, ಮುಂಬರುವ ಹಬ್ಬಗಳ ನಿಟ್ಟಿನಲ್ಲಿ ಸರ್ಕಾರಿ ನೌಕರರ ಬೇಡಿಕೆಯನ್ನು ಉತ್ತೇಜಿಸುವ ನೆಲೆಯಲ್ಲಿ ಎಲ್ ಟಿಸಿ ನಗದು ವೋಚರ್ ಯೋಜನೆ ಹಾಗೂ ಹಬ್ಬದ ಮುಂಗಡ ಯೋಜನೆ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿದ ನಿರ್ಮಲಾ ಸೀತಾರಾಮನ್, ಸಂಘಟಿತ ವಲಯದ ಉದ್ಯೋಗಿಗಳು ಹೆಚ್ಚಳವಾಗಿದ್ದು, ಉಳಿತಾಯ ಹೆಚ್ಚಳವಾಗಲಿದೆ. ಹಾಗಾಗಿ ಇಂತಹ ಜನರ ಬೇಡಿಕೆಯನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಇನ್ನು ಎಲ್ ಟಿಸಿ ನಗದು ವೋಚರ್ ಯೋಜನೆಯಡಿಯಲ್ಲಿ ಸರ್ಕಾರಿ ನೌಕರರು ರಜೆಯ ನಗದು ಪಡೆಯುವ ಅವಕಾಶ ಇದ್ದು, ಎಲ್ ಟಿಸಿ ನಗದು ವೋಚರ್ ಯೋಜನೆ ಮೂಲಕ ಮೂರು ಸೌಲಭ್ಯ ಪಡೆಯಬಹುದಾಗಿದ್ದು, ಪ್ರಯಾಣ ದರ ತೆರಿಗೆ ರಹಿತವಾಗಿರುತ್ತದೆ. ವಿಮಾನ ಅಥವಾ ರೈಲು ಪ್ರಯಾಣದ ದರ ದಿನದ ಲೆಕ್ಕದಲ್ಲಿ ಮರುಪಾವತಿಗೆ ಹಾಗೂ 10ದಿನಗಳ ಸಂಬಳ ಸಹಿತ ರಜೆ ಸಿಗಲಿದೆ ಎಂದು ತಿಳಿಸಿದ್ದಾರೆ.