ಬದೌನ್, ಅ. 12 (DaijiworldNews/PY): ತನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆಯೊಬ್ಬರ ದೂರಿನ ಹಿನ್ನೆಲೆ ಬದೌನ್ನಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತನೋರ್ವನನ್ನು ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ದೂರಿನ ಅನ್ವಯ, ಸಹಸ್ವಾನ್ ಬಿಜೆಪಿ ಸ್ಥಳೀಯ ಅಧ್ಯಕ್ಷ ವಿಪಿನ್ ಮಾಲಿ ವಿರುದ್ದ ಪ್ರಕರಣ ದಾಖಲಾಗಿದ್ದು, ಅವರನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಸಹಸ್ವಾನ್ ಬಿಜೆಪಿ ಸ್ಥಳೀಯ ಅಧ್ಯಕ್ಷ ವಿಪಿನ್ ಮಾಲಿ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ದಿನಳ ಹಿಂದೆ ಮಹಿಳೆ ನೀಡಿರುವ ದೂರಿನ ಪ್ರಕಾರ, ಮಾಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆಕೆ ಕೂಗಿಕೊಂಡ ಸಂದರ್ಭ ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಹೇಳಿದ್ದಾರೆ.
ತನಿಖೆಯ ನಂತರ ಮಾಲಿಯ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಬದೌನ್ನ ಬಿಜೆಪಿ ಅಧ್ಯಕ್ಷ ಅಶೋಕ್ ಭಾರ್ತಿಯಾ, ಕೆಲವು ಮಂದಿ ಪಿತೂರಿ ನಡೆಸಿ ಮಾಲಿಯನ್ನು ಬಂಧಿಸುಂತೆ ಮಾಡಿದ್ದಾರೆ. ಆದರೆ, ಘಟನೆಯ ಸಂದರ್ಭ ಆತ ಹೂಮಾಲೆ ತಯಾರಿಸಲು ಶಹವಾಜ್ಪುರಕ್ಕೆ ಹೋಗಿದ್ದರು. ನ್ಯಾಯಾಲಯದ ಬಗ್ಗೆ ನನಗೆ ಸಂಪೂರ್ಣವಾದ ನಂಬಿಕೆ ಇದೆ ಎಂದು ಹೇಳಿದ್ದಾರೆ.