ಶ್ರೀನಗರ, ಅ. 12 (DaijiworldNews/HR): ಕಳೆದ 9 ತಿಂಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎಂಟು ಪ್ರತ್ಯೇಕ ಎನ್ಕೌಂಟರಲ್ಲಿ 18 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಡಿಜಿಪಿ ದಿಲ್ಬಾಗ್ ಸಿಂಗ್ ಅವರು, ಲಷ್ಕರ್-ಎ-ತೋಯಿಬಾ ಶ್ರೀನಗರದಲ್ಲಿ ನೆಲೆಯೂರಲು ಯತ್ನಿಸುತ್ತಿದ್ದು, ಅಲ್ಲಿ ನೆಲೆ ಸ್ಥಾಪಿಸುವ ಮೊದಲೇ ಉಗ್ರರನ್ನು ಪತ್ತೆ ಹಚ್ಚಿ ಅವರನ್ನು ನಿರ್ಮೂಲನೆಗೊಳಿಸಲು ಭದ್ರತಾ ಪಡೆಗಳಿಗೆ ಸಾಧ್ಯವಾಗಿದೆ ಎಂದರು.
ಇನ್ನು ಉಗ್ರರು ನಗರದಲ್ಲಿ ನೆಲೆಯೂರಲು ಪ್ರಯತ್ನಿಸಿದಾಗಲೆಲ್ಲಾ, ಸೇನೆ ಅವರನ್ನು ನಿರ್ಮೂಲನೆ ಮಾಡುತ್ತಿದೆ. ಉಗ್ರರು ನಗರದೊಳಗೆ ಬರುವುದನ್ನು ತಡೆಯಲಾಗುತ್ತಿದೆ. ಏಕೆಂದರೆ ಶ್ರೀನಗರಕ್ಕೆ ಬರುವ ಪ್ರತಿಯೊಬ್ಬರನ್ನೂ ಯಂತ್ರದ ಮೂಲಕ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.