ನವದೆಹಲಿ, ಅ. 12 (DaijiworldNews/HR): ಖ್ಯಾತನಟಿ ಖುಷ್ಬೂ ಸುಂದರ್ ಕಾಂಗ್ರೆಸ್ ಬಿಟ್ಟು ಹೋಗಿದ್ದು, ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ನಲ್ಲಿ ಕೆಳಮಟ್ಟದ ನಾಯಕರ ಮೇಲೆ ಮೇಲ್ಮಟ್ಟದಲ್ಲಿ ಕುಳಿತ ನಾಯಕರು ತುಳಿಯುತ್ತಿದ್ದು, ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ನಟಿ ಖುಷ್ಬೂ ಸುಂದರ್ ಅವರು ದಿಢೀರ್ ರಾಜಕೀಯ ಬೆಳಣಿಗೆಯಲ್ಲಿ ಪಕ್ಷವನ್ನು ತೊರೆದು ಹೋಗಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಖುಷ್ಬೂ ಹೊರ ಹೋಗಿರುವುದರಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ತಮಿಳುನಾಡು ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದಾಗಿ ತಮಿಳುನಾಡು ರಾಜ್ಯದ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ದಿನೇಶ್ ಗುಂಡೂರಾವ್ ಪಿಟಿಐಗೆ ತಿಳಿಸಿದ್ದಾರೆ.
ಖುಷ್ಬೂ ಅವರು ಕಾಂಗ್ರೆಸ್ ನಲ್ಲಿ ಯಾರನ್ನೂ ಹತ್ತಿಕ್ಕುವ ಮತ್ತು ತುಳಿಯುವ ಕೆಲಸ ಆಗುತ್ತಿದ್ದೆ ಎಂದು ದೂರಿದ್ದರು, ಆದರೆ ಆ ರೀತಿಯ ಯಾವುದೇ ಕೆಲಸಗಳು ಆಗುತ್ತಿಲ್ಲ, ಅದಾಗ್ಯೂ ನಡೆಯುತ್ತಿರುವ ಇತ್ತೀಚಿನ ರಾಜಕೀಯ ಬೆಳವಣಿಗೆ ಮುಂಬರುವ ತಮಿಳುನಾಡು ಚುನಾವಣೆ ಮೇಲೆ ಯಾವುದೇ ರೀತಿ ಪ್ರಭಾವ ಬೀರುವುದಿಲ್ಲ. ಅವರು ಖ್ಯಾತ ನಟಿ ಆಗಿರುವುದರಿಂದ ಈ ವಿಚಾರ ಸ್ವಲ್ಪ ದಿನಗಳವರೆಗೂ ಚರ್ಚೆಯಲ್ಲಿ ಇರುತ್ತದೆ. ಬಳಿಕ ಜನರು ಈ ವಿಚಾರವನ್ನು ಮರೆತು ಬಿಡುತ್ತಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.