ಬೆಂಗಳೂರು, ಅ. 12 (DaijiworldNews/PY): ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದಕ್ಕೆ ಪುರಾವೆಯಾಗಿ ಸಚಿವರ ದಿಢೀರ್ ಬದಲಾವಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೊನಾ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ನಡುವೆ ಸಚಿವರ ದಿಢೀರ್ ಬದಲಾವಣೆಯಾಗಿದ್ದು, ಇದಕ್ಕೆ ಪುರಾವೆ. ಆರೋಗ್ಯ ಸಚಿವರನ್ನು ಬದಲಾಯಿಸಿರುವುದು ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತದೆ. ರಾಜ್ಯದಲ್ಲಿ ಕೊರೊನಾದಿಂದ ಅಪಾರ ಪ್ರಮಾಣ ಜೀವಹಾನಿಯಾಗಿದೆ. ಸರ್ಕಾರವು, ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ಬೆಳವಣಿಗೆಯಲ್ಲಿ ಬಿ ಶ್ರೀರಾಮುಲು ಅವರ ಬಳಿಯಿದ್ದ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಡಾ. ಸುಧಾಕರ್ ಕೆ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಸಚಿವ ಬಿ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಖಾತೆ ಜವಾಬ್ದಾರಿಯನ್ನು ನೀಡಲಾಗಿದೆ.
ಇನ್ನು ಶ್ರೀರಾಮುಲು ಅವರು ಹಲವು ದಿನಗಳಿಂದ ಖಾತೆ ಬದಲಾವಣೆ ಮಾಡುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದ್ದರು ಎಂದು ಹೇಳಿದ್ದರು.