ದಾವಣಗೆರೆ, ಅ. 13 (DaijiworldNews/HR): ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿ ರಾಜಕಾರಣ ಮಾಡುವಲ್ಲಿ ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ನಿಪುಣರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರು ಕಾಂಗ್ರೆಸ್ಗೆ ಹಾಗೂ ಹಿಂದೂಗಳು ಬಿಜೆಪಿಗೆ ಮತ ಹಾಕುವುದು ಚುನಾವಣೆಗಳಲ್ಲಿ ತೀರ್ಮಾನವಾಗಿಬಿಟ್ಟಿದೆ. ದೇವೇಗೌಡ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೇಕು ಎನ್ನುವ ಸ್ಥಿತಿ ಈಗ ಇಲ್ಲ' ಎಂದರು.
ಇನ್ನು ಚುನಾವಣೆಯ ಸಂಧರ್ಭದಲ್ಲಿ ಮಾತ್ರ ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿಯವರು ಎಂಬ ಪದಗಳನ್ನು ಬಳಸಿಕೊಳ್ಳುತ್ತಾರೆ. ಜಾತಿವಾದಿ ಎಂದು ಒಬ್ಬರಿಗೊಬ್ಬರು ಆರೋಪಿಸುತ್ತಿದ್ದಾರೆ. ಅವರಿಗೆ ಬೇಕಾಗಿರೋದು ವೋಟು ಅಷ್ಟೇ. ಇನ್ನು ಸಿದ್ದರಾಮಯ್ಯ ಅವರು ಅಹಿಂದ ನಾಯಕ ಎಂದು ಹೇಳಿ ಹೊರಟರು. ಈಗ ಅವರ ಜೊತೆ ಕುರುಬರು ಬಿಟ್ಟರೆ ಯಾರೂ ಇಲ್ಲ ಎಂದು ಹೇಳಿದ್ದಾರೆ.