ಗಾಜಿಯಾಬಾದ್, ಅ. 13 (DaijiworldNews/PY): ಕೊರೊನಾ ನೋಡಲ್ ಅಧಿಕಾರಿಯೊಬ್ಬರು ಮಗುವಿಗೆ ಜನ್ಮ ನೀಡಿದ ಎರಡೇ ವಾರಗಳಲ್ಲಿ ಪುನಃ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಗಾಜಿಯಾಬಾದ್ ಜಿಲ್ಲೆಯ ಮೋದಿನಗರದ ಸಬ್ -ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಆಗಿರುವ ಸೌಮ್ಯ ಪಾಂಡೆ ಅವರು ಪ್ರಸವ ಬಳಿಕ 14 ದಿನಗಳಲ್ಲಿ ಹೆಣ್ಣು ಮಗುವಿನೊಂದಿಗೆ ಕರ್ತವ್ಯಕ್ಕೆ ವಾಪಾಸ್ಸಾಗಿದ್ದು, ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ನಾನು ಐಎಎಸ್ ಅಧಿಕಾರಿಯಾಗಿದ್ದು, ನನ್ನ ಕರ್ತವ್ಯದ ಮೇಲೆ ಗಮನ ನೀಡಬೇಕಿದೆ. ದೇವರು ಮಹಿಳೆಗೆ ಮಗುವಿಗೆ ಜನ್ಮ ನೀಡುವ ಹಾಗೂ ಆರೈಕೆ ಮಾಡುವ ಸಾಮರ್ಥ್ಯವನ್ನು ನೀಡಿದ್ದಾರೆ. ನಾನೂ ಕೂಡಾ ನನ್ನ ಆಡಳಿತದ ಕಾರ್ಯಗಳೊಂದಿಗೆ ನನ್ನ ಮಗುವಿನ ಆರೈಕೆಯನ್ನೂ ಕೂಡಾ ಮಾಡುತ್ತಿದ್ದೇನೆ. ನನಗೆ ನನ್ನ ಕುಟುಂಬದವರು ಬೆಂಬಲ ನೀಡಿದ್ದಾರೆ ಎಂದಿದ್ದಾರೆ.
ನಾನು ಜುಲೈನಿಂದ ಸೆಪ್ಟೆಂಬರ್ನವರೆಗೂ ಗಾಜಿಯಾಬಾದ್ನ ಕೊರೊನಾ ನೋಡಲ್ ಅಧಿಕಾರಿಯಾಗಿದ್ದೆ. ಬಳಿಕ ನಾನು ಸೆಪ್ಟೆಂಬರ್ನಲ್ಲಿ 22 ದಿನಗಳ ರಜೆ ತೆಗೆದುಕೊಂಡಿದ್ದು, ಪ್ರಸವದ ಬಳಿಕ ಎರಡು ವಾರಗಳಲ್ಲಿ ನಾನು ನನ್ನ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಕೊರೊನಾದ ವೇಳೆ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೋರ್ವ ಗರ್ಭಿಣಿಯೂ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾರೆ.