ನವದೆಹಲಿ, ಅ. 13 (DaijiworldNews/PY): ಹಿಮಾಚಲ ಪ್ರದೇಶದ ರೋಹ್ಟಂಗ್ನಲ್ಲಿರುವ ಅಟಲ್ ಸುರಂಗದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹೆಸರಿದ್ದ ನಾಮಫಲಕ ಕಿತ್ತು ಹಾಕಲಾಗಿದ್ದು, ಈ ಹಿನ್ನೆಲೆ ಕುಪಿತಗೊಂಡ ಹಿಮಾಚಲ ಪ್ರದೇಶದ ಕಾಂಗ್ರೆಸ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಟಲ್ ಸುರಂಗವನ್ನು ಉದ್ಘಾಟಿಸಿದ್ದರು.
ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷರಾಗಿದ್ದ ಸಂದರ್ಭ ಅಟಲ್ ಸುರಂಗಕ್ಕೆ 2010ರ ಜೂನ್ 28ರಂದು ಅಡಿಪಾಯ ಹಾಕಿದ್ದರು. ಶಂಕು ಸ್ಥಾಪನೆಯ ಸಂದರ್ಭ ಸೋನಿಯಾ ಗಾಂಧಿ ಸೇರಿಂದಂತೆ ಯುಪಿಎ ಸರ್ಕಾರದ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಯಕರ ಹೆಸರಿನ ನಾಮಫಲಕವನ್ನು ಹಾಕಲಾಗಿತ್ತು. ಆದರೆ, ಅಟಲ್ ಸುರಂಗದ ಉದ್ಘಾಟನೆಗೂ ಮೊದಲು ಸೋನಿಯಾ ಗಾಂಧಿ ಅವರ ಹೆಸರಿದ್ದ ನಾಮಫಲಕವನ್ನು ಕಿತ್ತು ಹಾಕಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕುಲ್ದೀಪ್ ಸಿಂಗ್ ರಾಥೋಡ್ ಅವರು, ನಾಮಫಲಕ ಕಾಣೆ ಆಗಿದೆ ಎನ್ನುವ ವಿಚಾರ ತಿಳಿದು ನನಗೆ ಆಶ್ಚರ್ಯವಾಗಿದೆ. 15 ದಿನದ ಒಳಗಡೆ ನಾಮಫಲಕವಿದ್ದ ಜಾಗದಲ್ಲಿ ಅದನ್ನು ಹಾಕಲು ಸರ್ಕಾರ ವಿಫಲವಾಗಿದ್ದೇ ಆದಲ್ಲಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾಮಫಲಕ ಕಾಣೆಯಾಗಿರುವ ಬಗ್ಗೆ ಕಾಂಗ್ರೆಸ್ ದೂರು ನೀಡಿದ್ದು, ಈ ಬಗ್ಗೆ ಎಫ್ಐಆರ್ ದಾಖಲಿಸಲಾಗಿದೆ. ನಾಮಫಲಕ ಹೇಗೆ ಕಾಣೆ ಆಗಿದೆ ಎಂದು ಪತ್ತೆ ಮಾಡುವುದು ಪೊಲೀಸ್ ಹಾಗೂ ಸರ್ಕಾರದ ಜವಾಬ್ದಾರಿ ಎಂದು ಕಾಂಗ್ರೆಸ್ ಏಳಿದೆ.