ಬೆಂಗಳೂರು, ಅ. 13 (DaijiworldNews/PY): ಆರೋಗ್ಯ ಖಾತೆ ಕೈ ತಪ್ಪಿ ಹೋದ ಬಳಿಕ ಶ್ರೀರಾಮುಲು ಅವರ ಮನವೊಲಿಸಲು ಸಿಎಂ ಬಿಎಸ್ವೈ ಹಾಗೂ ಸಚಿವ ಸುಧಾಕರ್ ಅವರು ಸಫಲರಾಗಿದ್ದಾರೆ. ಆರೋಗ್ಯ ಖಾತೆ ದೊರೆತ ನಂತರ ಮೊದಲಿಗೆ ಪ್ರತಿಕ್ರಿಯೆ ನೀಡಿರುವ ಅವರು, "ಆರೋಗ್ಯ ಕರ್ನಾಟಕ" ವನ್ನು ಕಟ್ಟುವ ಮಹತ್ವಾಕಾಂಕ್ಷೆ ನನ್ನದು ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ಮಾನ್ಯ ಸಮಾಜ ಕಲ್ಯಾಣ ಖಾತೆ ಸಚಿವರಾದ ಶ್ರೀರಾಮುಲು ಅವರೊಂದಿಗೆ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಲಾಯಿತು. ನನ್ನ ಮೇಲೆ ಅತ್ಯಂತ ವಿಶ್ವಾಸವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ನೀಡಿರುವುದಕ್ಕೆ ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ ಅತ್ಯುತ್ತಮವಾದ ಸರ್ಕಾರಿ ಆರೋಗ್ಯ ಸೇವೆಯ ಜೊತೆಗೆ ಉತ್ತಮ ವೈದ್ಯರು, ಅಧಿಕಾರಿಗಳು ಇದ್ದಾರೆ. ಅವರೆಲ್ಲರ ತಂಡದ ಸದಸ್ಯನಾಗಿ, ಅವರೊಂದಿಗೇ ಇದ್ದು, "ಆರೋಗ್ಯ ಕರ್ನಾಟಕ" ವನ್ನು ಕಟ್ಟುವ ಮಹತ್ವಾಕಾಂಕ್ಷೆ ನನ್ನದು. ಸರ್ಕಾರಿ ಆಸ್ಪತ್ರೆ ಬಡವರಿಗೆ, ಖಾಸಗಿ ಆಸ್ಪತ್ರೆ ಶ್ರೀಮಂತರಿಗೆ ಎಂಬ ಮನೋಧೋರಣೆ ಬದಲಾಯಿಸುವುದು ನನ್ನ ಗುರಿ ಎಂದು ಹೇಳಿದ್ದಾರೆ.