ಮುಂಬೈ, ಅ. 13 (DaijiworldNews/MB) : ''ಕೃಷಿ ಮಸೂದೆಗಳು ರೈತರನ್ನು ಅನ್ನದಾತನ ಪಾತ್ರದಿಂದ ಉದ್ಯಮಶೀಲರನ್ನಾಗಿ ಮಾರ್ಪಾಡಿಸುತ್ತದೆ. ಹಾಗೆಯೇ ಆದಾಯವನ್ನು ಕೂಡಾ ಹೆಚ್ಚಿಸುತ್ತದೆ'' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಮಂಗಳವಾರ ಕೇಂದ್ರದ ಮಾಜಿ ಸಚಿವ ಬಾಲಾಸಾಹೇಬ್ ವಿಖೆ ಪಾಟೀಲ್ ಅವರ ಆತ್ಮಚರಿತ್ರೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಬಿಡುಗಡೆಗೊಳಿಸಿ, ಅಹಮದ್ನಗರ ಜಿಲ್ಲೆಯ ಪ್ರವರ ಗ್ರಾಮೀಣ ಶಿಕ್ಷಣ ಸೊಸೈಟಿಗೆ ಮರುನಾಮಕರಣ ಮಾಡಿ ಮಾತನಾಡಿದ ಅವರು, ''ಈ ಹೊಸ ಕೃಷಿ ಮಸೂದೆಗಳು ರೈತರನ್ನು ಉದ್ಯಮಿಗಳನ್ನಾಗಿಸಲು ಸಹಕಾರಿಯಾಗಿದೆ'' ಎಂದು ಹೇಳಿದರು.
ಅಧಿಕ ಪ್ರಮಾಣದಲ್ಲಿ ಹಾಲು, ಸಕ್ಕರೆ ಮತ್ತು ಗೋಧಿ ಉತ್ಪಾದಿಸುವ ಗುಜರಾತ್, ಮಹಾರಾಷ್ಟ್ರ, ಹರಿಯಾಣ ಮತ್ತು ಪಂಜಾಬ್ ಬಗ್ಗೆ ಉಲ್ಲೇಖ ಮಾಡಿದ ಅವರು, ''ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುವ ಇಂತಹ ಸ್ಥಳೀಯ ಉದ್ಯಮಗಳು ದೇಶದ ಅಭಿವೃದ್ದಿಗೆ ಸಹಕಾರಿ. ಸ್ವಾತಂತ್ಯ್ರದ ಬಳಿಕ ದೇಶದಲ್ಲಿ ಆಹಾರದ ಸಮಸ್ಯೆ ಇದ್ದ ಕಾರಣ ಆಗಿನ ಸರ್ಕಾರ ಆಹಾರ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದೆ. ರೈತರು ಆಹಾರ ಉತ್ಪಾದನೆಗೆ ಆದ್ಯತೆ ನೀಡಿದ ಸಂದರ್ಭದಲ್ಲಿ ಸರ್ಕಾರ ಅದಕ್ಕೆ ಪೂರಕವಾದ ನೀತಿ ಜಾರಿಗೆ ತರಲಿಲ್ಲ. ಆ ಸರ್ಕಾರ ರೈತರ ಆದಾಯದ ಬಗ್ಗೆ ಚಿಂತಿಸಿಲ್ಲ. ಆದರೆ ನಮ್ಮ ಸರ್ಕಾರ ಮೊದಲ ಬಾರಿಗೆ ರೈತರಿಗೆ ಸಹಕಾರಿಯಾಗುವ ಮಸೂದೆಗಳನ್ನು ಜಾರಿಗೆ ತಂದಿದ್ದೇವೆ'' ಎಂದರು.