ಬೆಂಗಳೂರು, ಅ. 13 (DaijiworldNews/MB) : ಕೊರೊನಾ ಸೋಂಕು ಕಾರಣದಿಂದಾಗಿ ರಾಜ್ಯದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದ ಜನರಿಗಾಗಿ ಮೀಸಲಿಸಿರುವ ಹಣದ ವೆಚ್ಚದಲ್ಲಿ ಗಮನೀಯ ಕುಸಿತ ಉಂಟಾಗಿದೆ. ಒಟ್ಟು ಮೊತ್ತದಲ್ಲಿ ಶೇ 20 ರಷ್ಟು ಮಾತ್ರ ಖರ್ಚಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಗೋವಿಂದ ಕಾರಜೋಳ ಅವರು ನಿರ್ವಹಿಸುತ್ತಿದ್ದ ಸಮಾಜಕಲ್ಯಾಣ ಇಲಾಖೆಯನ್ನು ಶ್ರೀರಾಮುಲು ಅವರಿಗೆ ಹಸ್ತಾಂತರ ಮಾಡುವುದಕ್ಕೂ ಮೊದಲು ಒಂದು ವರ್ಷದ ಸಾಧನೆಗಳ ಮಾಹಿತಿಯನ್ನು ಅವರು ಪತ್ರಿಕಾಗೋಷ್ಟಿ ನಡೆಸಿ ನೀಡಿದರು.
2020–21 ರ ಸಾಲಿಗೆ ಎಸ್ಸಿಎಸ್ಪಿ/ಟಿಎಸ್ಪಿ ಅಡಿ 27,699 ಕೋಟಿ ಅನುದಾನ ಮೀಸಲಿದ್ದು ಸೆಪ್ಟಂಬರ್ವರೆಗೆ 5,603 ಕೋಟಿ ಮಾತ್ರ ಖರ್ಚಾಗಿದೆ. ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಹಲವು ಚಟುವಟಿಕೆಗಳು ಸ್ಥಗಿತವಾಗಿದ್ದವ. ಹಾಗೆಯೇ ಪರಿಶಿಷ್ಟಜಾತಿ ಮತ್ತು ಪಂಗಡಗಳ ವಿದ್ಯಾರ್ಥಿನಿಲಯಗಳು ಪ್ರಾರಂಭವಾಗಿಲ್ಲ. ಈ ಕಾರಣದಿಂದಾಗಿ ಹೆಚ್ಚು ಹಣ ವೆಚ್ಚವಾಗಿಲ್ಲ. ಆದರೆ 2019–20 ಸಾಲಿನಲ್ಲಿ ಮೀಸಲಿರಿಸಿದ್ದ 27,558 ಕೋಟಿಯಲ್ಲಿ 25,387 ಕೋಟಿ ವೆಚ್ಚ ಮಾಡಿ ಶೇ. 92 ರಷ್ಟು ಪ್ರಗತಿ ಸಾಧಿಸಲಾಗಿತ್ತು ಎಂದು ತಿಳಿಸಿದ್ದಾರೆ.
2019–20 ಸಾಲಿನಲ್ಲಿ ಪರಿಶಿಷ್ಟ ಜಾತಿಗೆ 18,228 ಕೋಟಿ, ಪರಿಶಿಷ್ಟ ಪಂಗಡಕ್ಕೆ 7,159 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಭೂ ಒಡೆತನ ಯೋಜನೆಯಡಿ 295 ಕೋಟಿ ವೆಚ್ಚದಲ್ಲಿ 3228 ಎಕರೆ ಜಮೀನನ್ನು ಖರಿದೀಸಿ 2,391 ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಹೇಳಿದರು.
ಇನ್ನು 2020–21 ರ ಸಾಲಿನಲ್ಲಿ ಭೂ ಒಡೆತನ ಯೋಜನೆಯಡಿ 349.11 ಕೋಟಿ ಮೀಸಲಿರಿಸಲಾಗಿದ್ದು141 ಕೋಟಿ ವೆಚ್ಚದಲ್ಲಿ 1,603.43 ಎಕರೆ ಜಮೀನು ಖರೀದಿಸಿ 1,151 ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.