ನವದೆಹಲಿ, ಅ. 13 (DaijiworldNews/PY): ಉತ್ತರಪ್ರದೇಶದ ಹತ್ರಸ್ನಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದ್ದ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಸಿಬಿಐ ತಂಡ, ಪರಿಶೀಲನೆ ನಡೆಸಿದೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಶಿಫಾರಸ್ಸು ಹಾಗೂ ಕೇಂದ್ರ ಸರ್ಕಾರದ ಅಧಿಸೂಚನೆಯ ಬಳಿಕ ಸಿಬಿಐ ತನಿಖೆಯನ್ನು ವಹಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ದಾಖಲೆಗಳನ್ನು ಸ್ವೀಕರಿಸಿದ್ದಾರೆ.
ಸಿಬಿಐ ತಂಡವು ಸಂತ್ರಸ್ತೆಯ ಸಹೋದರನನ್ನು ಭೇಟಿ ಮಾಡಿದ್ದು, ಘಟನೆ ನಡೆದ ಸ್ಥಳವನ್ನು ತೋರಿಸಲು ಸೂಚನೆ ನೀಡಿತ್ತು. ಘಟನೆ ನಡೆದ ಒಂದು ತಿಂಗಳ ಬಳಿಕ ಸಿಬಿಐ ತಂಡ ಭೇಟಿ ನೀಡಿದೆ.
ಘಟನೆಯ ಬಗ್ಗೆ ಕೇಂದ್ರ ವಿಧಿ-ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳನ್ನು ಕೇಂದ್ರ ತಂಡದ ಅಧಿಕಾರಿಗಳು ಭೇಟಿ ಆಗುವ ಸಾಧ್ಯತೆ ಇದೆ.
ಈ ಘಟನೆ ಸೆ.29ರಂದು ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಯುವತಿ ದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.