ಮುಂಬೈ, ಅ. 13 (DaijiworldNews/MB) : ಮಹಾರಾಷ್ಟ್ರದಲ್ಲಿ ದೇಗುಲಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ಮತ್ತೆ ತೆರೆಯುವ ವಿಷಯಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ನಡುವೆ ವಾಕ್ಸಮರ ನಡೆಯುತ್ತಲ್ಲೇ ಇದ್ದು ''ದಿಢೀರ್ ಆಗಿ ನೀವು ಜಾತ್ಯತೀತರಾದಿರೇ'' ಎಂದು ಸಿಎಂ ಉದ್ಧವ್ಗೆ ರಾಜ್ಯಪಾಲ ಕೋಶಿಯಾರಿ ಪ್ರಶ್ನಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರ ಸರ್ಕಾರಕ್ಕೆ ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳ ಪುನರಾರಂಭಕ್ಕೆ ಅವಕಾಶ ನೀಡಲು ಹಲವು ಧಾರ್ಮಿಕ ಸಂಘಟನೆಗಳು ಮನವಿ ಮಾಡುತ್ತಲ್ಲೇ ಇದ್ದು ಆದರೆ ಸರ್ಕಾರ ಈವರೆಗೆ ಅನುಮತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಶಿವಸೇನಾ ನೇತೃತ್ವ ಸರ್ಕಾರದ ಮುಖ್ಯಮಂತ್ರಿ ಉದ್ದವ್ ಠಾಕ್ರೆಗೆ ಪತ್ರ ಬರೆದಿರುವ ರಾಜ್ಯಪಾಲರು, ''ಪೂಜಾ ಸ್ಥಳಗಳಲ್ಲಿ ಪೂಜೆಗಳನ್ನು ಪುನರ್ ಆರಂಭ ಮಾಡಲು ಯಾವುದಾದರೂ ದೈವೀಕ ಮುನ್ಸೂಚನೆಯನ್ನು ಪಡೆಯುತ್ತಿದ್ದೀರಾ ಅಥವಾ ನೀವು ದ್ವೇಷಿಸುತ್ತಿದ್ದ ಜಾತ್ಯಾತೀತರು ದಿಢೀರ್ ಆಗಿ ನಿವೇ ಆಗಿದ್ದೀರೇ'' ಎಂದು ಟೀಕಿಸಿದ್ದಾರೆ.
''ಹಾಗೆಯೇ ನೀವು ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿದ್ದೀರಿ. ಮುಖ್ಯಮಂತ್ರಿಯಾದ ಬಳಿಕ ಅಯೋಧ್ಯೆಗೆ ಹೋಗಿ ಶ್ರೀ ರಾಮನ ಮೇಲೆ ನಿಮಗಿರುವ ಭಕ್ತಿಯನ್ನು ಸಾವರ್ಜನಿಕವಾಗಿ ತಿಳಿಸಿದ್ದೀರಿ. ಆಷಾಢ ಏಕಾದಶಿಯಂದು ಫಂಡರಾಪುರದ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೀರಿ'' ಎಂದು ಕೂಡಾ ಉಲ್ಲೇಖ ಮಾಡಲಾಗಿದೆ.
ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಬಳಿಕವೂ ದೇವಾಲಯಗಳ ಪುನರ್ ಆರಂಭಕ್ಕೆ ಅವಕಾಶ ನೀಡದಿರುವುದಕ್ಕೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.