ಝಾನ್ಸಿ, ಅ. 13 (DaijiworldNews/PY): ಸಹಪಾಠಿ ಬಾಲಕಿಯೋರ್ವಳಿಗೆ ಬೆದರಿಕೆ ಹಾಕಿ. ಅತ್ಯಾಚಾರವೆಸಗಿದ ಆರೋಪದಡಿ ಸರ್ಕಾರ ಪಾಲಿಟೆಕ್ನಿಕ್ ಸಂಸ್ಥೆಯ ಎಂಟು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಓರ್ವ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಉಳಿದವರು ಹೊರಗಡೆ ಕಾಯುತ್ತಿದ್ದರು. ಈ ವೇಳೆ ಕ್ಯಾಂಪಸ್ನಲ್ಲಿ ಪರೀಕ್ಷೆ ನಡೆಯುತ್ತಿತ್ತು. ಹಾಗಾಗಿ ಉಪನ್ಯಾಸಕರು ಪರೀಕ್ಷಾ ಕಾರ್ಯದಲ್ಲಿದ್ದರು. ಘಟನೆ ನಡೆದ ಸ್ಥಳ ಹಾಸ್ಟೇಲ್ ಕಾಲೇಜು ಕಟ್ಟಡದಿಂದ ದೂರವಿದ್ದ ಕಾರಣ, ಘಟನೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಬಾಲಕಿಗೆ ವಿದ್ಯಾರ್ಥಿಗಳು ಬೆದರಿಕೆ ಹಾಕಿ ಆಕೆಯಿಂದ 3,000 ರೂ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಾಲಕಿಯೇ ದೂರು ನೀಡಿದ್ದಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಹೇಳಿದ್ದಾರೆ.
ಎಂಟು ವಿದ್ಯಾರ್ಥಿಗಳನ್ನು ಸೋಮವಾರ ಬಂಧಿಸಲಾಗಿದ್ದು, ವಿದ್ಯಾರ್ಥಿಗಳ ವಿರುದ್ದ ಐಪಿಸಿ ಹಾಗೂ ಪೋಕ್ಸೋ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗುವುದು. ಇದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಎಂಟು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಕ್ಕೆ ಹಾಕುವಂತೆ ಆದೇಶ ನೀಡಲಾಗಿದೆ. ಅಲ್ಲದೇ, ಇವರ ವಿರುದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ವಂಶಿ ತಿಳಿಸಿದ್ದಾರೆ.