ಗುವಾಹಟಿ, ಅ. 13 (DaijiworldNews/PY): ಗೋವನ್ನು ಹಿಂದೂಗಳು ಆರಾಧಿಸುತ್ತಾರೆ. ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಗೋಮಾಂಸದ ಬದಲು ಬೇರೆ ಪ್ರಾಣಿಗಳ ಮಾಂಸವನ್ನು ಯಾಕೆ ಕೊಡಬಾರದು? ಕಡವೆ ಮಾಂಸ ನೀಡಬಹುದು ಎಂದು ಅಸ್ಸಾಂನ ಯುವ ಬಿಜೆಪಿ ನಾಯಕ ಸತ್ಯರಂಜನ್ ಬೋರಾ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಈ ವಿಚಾರವಾಗಿ ಸತ್ಯರಂಜನ್ ಬೋರಾ ಹಾಗೂ ಬೆಂಬಲಿಗರು ಆಗ್ರಹಿಸಿದ್ದು, ಗುವಾಹಟಿಯಲ್ಲಿರುವ ಮೃಗಾಲಯಗಳಿಗೆ ಗೋಮಾಂಸ ಕೊಂಡೊಯ್ಯುತ್ತಿದ್ದ ವಾಹನವನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ.
ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಆಹಾರವಾಗಿ ನೀಡುವ ಸಲುವಾಗಿ ಆಗುವ ಗೋಹತ್ಯೆ ನಿಲ್ಲುವ ತನಕ ನಾವು ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.
ಈ ಸಂದರ್ಭ ಪ್ರತಿಕಾರರನ್ನು ಚದುರಿಸಿದ ಮೃಗಾಲಯದ ಅಧಿಕಾರಿಗಳು ಪ್ರಾಣಿಗಳಿಗೆ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಯಂತೆ ಆಹಾರ ನೀಡಲಾಗುತ್ತಿದ್ದು, ನಿಮ್ಮ ಬೇಡಿಕೆಯ ಬಗ್ಗೆ ಕೇಂದ್ರ ಪ್ರಾಧಿಕಾರ ಅಧಿಕಾರಿಗಳ ಬಳಿ ತಿಳಿಸಿ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಭಾಗೀಯ ಅರಣ್ಯಾಧಿಕಾರಿ ತೇಜಸ್ ಮರಿಸ್ವಾಮಿ ಅವರು, ಕಡವೆಯು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬರುವ ಪ್ರಾಣಿಯಾಗಿದ್ದು, ಅದನ್ನು ಕೊಲ್ಲುವ ಹಾಗಿಲ್ಲ ಎಂದು ತಿಳಿಸಿದ್ದಾರೆ.