ಶ್ರೀನಗರ, ಅ. 14 (DaijiworldNews/MB) : ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದಂದಿನಿಂದ ಸುಮಾರು 14 ತಿಂಗಳುಗಳವರೆಗೂ ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ (ಪಿಎಸ್ಎ) ಗೃಹ ಬಂಧನದಲ್ಲಿರಿಸಿದ್ದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಮಂಗಳವಾರ ತಡರಾತ್ರಿ ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಆಡಳಿತದ ಮುಖ್ಯ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಅವರು, ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಮುಫ್ತಿ ಅವರನ್ನು ಕಳೆದ 14 ತಿಂಗಳುಗಳಿಂದ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಅವರ ಬಂಧನದ ಅವಧಿಯನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಹೀಗಾಗಿ ತಮ್ಮ ಬಂಧನದ ಅವಧಿ ವಿಸ್ತರಣೆಯನ್ನು ಪ್ರಶ್ನಿಸಿ ಮೆಹಬೂಬಾ ಅವರ ಪುತ್ರಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇನ್ನೆಷ್ಟು ದಿನಗಳವರೆಗೆ ಮೆಹಬೂಬಾ ಮುಫ್ತಿ ಅವರನ್ನು ಬಂಧನದಲ್ಲಿಡಬಹುದು? ಎಂದು ಕೇಂದ್ರ ಹಾಗೂ ಕಾಶ್ಮೀರ ಆಡಳಿತವನ್ನು ಪ್ರಶ್ನಿಸಿದ್ದು ಬಿಡುಗಡೆಗಾಗಿ ಎರಡು ವಾರಗಳ ಕಾಲಾವಕಾಶ ನೀಡುವಂತೆ ಕಾಶ್ಮೀರ ಆಡಳಿತ ಮನವಿ ಮಾಡಿತ್ತು.