ತುಮಕೂರು, ಅ. 14 (DaijiworldNews/MB) : ಸಂಸತ್ತು ಅಂಗೀಕರಿಸಿದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಕ್ಕಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ದ ತುಮಕೂರು ಜಿಲ್ಲಾ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
ಕಳೆದ ವಾರ ತುಮಕೂರು ನ್ಯಾಯಾಲಯವು ರೈತರ ವಿರುದ್ದ ಟ್ವೀಟ್ ಮಾಡಿದ ಕಂಗನಾ ರಣಾವತ್ ವಿರುದ್ದ ಪ್ರಕರಣ ದಾಖಲಿಸುವಂತೆ ಸ್ಥಳೀಯ ಠಾಣೆಯ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ವಕೀಲ ಎಲ್ ರಮೇಶ್ ನಾಯಕ್ ಅವರು ನೀಡಿದ ದೂರಿನ ಬಗ್ಗೆ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯವು ಈ ತೀರ್ಪು ನೀಡಿದೆ.
"ಜನಪ್ರಿಯ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ದದ ನನ್ನ ದೂರು ಯಾವುದೇ ಪ್ರಚಾರವನ್ನು ಪಡೆಯುವ ಸಲುವಾಗಿ ಅಲ್ಲ ಬದಲಾಗಿ ಕಂಗನಾ ಮಾಡಿದ ತಪ್ಪಿನ ಅರಿವು ಅವರಿಗೆ ಮೂಡಿಸಲು. ಯಾವುದೇ ಸರ್ಕಾರದ ನೀತಿಯನ್ನು ವಿರೋಧಿಸಿ ರೈತರು ಬೀದಿಗಿಳಿದಾಗ, ಕಂಗನಾ ಆಲೋಚಿಸಿದ್ದಂತೆ ರೈತರು ಭಯೋತ್ಪಾದಕರಲ್ಲ. ನಾನು ಇಂತಹ ಅನೇಕ ಪ್ರತಿಭಟನೆಗಳಿಗೆ ಸೇರಿಕೊಂಡಿದ್ದೇನೆ, ನಾನು ಭಯೋತ್ಪಾದಕನಾ? ಈ ಬಗ್ಗೆ ಕಂಗನಾ ಸ್ಪಷ್ಟೀಕರಣ ನೀಡುವ ಅಗತ್ಯವಿದೆ. ಹಾಗಾಗಿ ನಾನು ಈ ಪ್ರಕರಣದ ವಿರುದ್ದ ಹೋರಾಟ ನಡೆಸುತ್ತೇನೆ" ಎಂದು ವಕೀಲ ಎಲ್ ರಮೇಶ್ ನಾಯಕ್ ತಿಳಿಸಿದ್ದಾರೆ.
ಸೆಪ್ಟೆಂಬರ್ 21 ರಂದು ಕಂಗನಾ ಟ್ವೀಟ್ ಮಾಡಿದ್ದು, "ಸಿಎಎ ಬಗ್ಗೆ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡಿದ ಗಲಭೆಗೆ ಕಾರಣವಾದ ಜನರು ಈಗ ರೈತರ ಮಸೂದೆಗಳ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ. ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುತ್ತಿದ್ದಾರೆ, ಅವರು ಭಯೋತ್ಪಾದಕರು" ಎಂದಿದ್ದರು. ನಟಿ ಕಂಗನಾ ಅವರ ಈ ಟ್ವೀಟ್ಗೆ ಭಾರೀ ಖಂಡನೆ ವ್ಯಕ್ತವಾಗಿತ್ತು.
ಈ ಟ್ವೀಟ್ ಪ್ರಚೋಧನಕಾರಿ, ಅವಹೇಳನಕಾರಿ, ಗುಂಪುಗಳ ನಡುವೆ ದ್ವೇಷ ಉಂಟು ಮಾಡುವಂತದ್ದು ಹಾಗೆಯೇ ರೈತರಿಗೆ ಮಾಡುವ ಅವಮಾನವಾಗಿದೆ ಎಂದು ಆರೋಪಿಸಿರುವ ಎಲ್ ರಮೇಶ್ ನಾಯಕ್ ಅವರು, ಈ ಬಗ್ಗೆ ದೂರು ದಾಖಲಿಸಲು ತುಮಕೂರು ಪೊಲೀಸರು ನಿರಾಕರಿಸಿದ ಬಳಿಕ ತುಮಕೂರು ನ್ಯಾಯಾಲಯದ ಮೆಟ್ಟಿಲೇರಿದ್ದರು.