ಬೆಂಗಳೂರು, ಅ. 14 (DaijiworldNews/PY): ಗ್ರಾಮ ಪಂಚಾಯತ್ ಚುನಾವಣೆಯನ್ನು ರಾಜ್ಯ ಸರ್ಕಾರ ಮತ್ತಷ್ಟು ಮುಂದೂಡುತ್ತಿರುವ ಹಿನ್ನೆಲೆ, 2020ರಲ್ಲೇ ಚುನಾವಣೆ ನಡೆಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದು, ಕೊರೊನಾ ಹಿನ್ನೆಲೆ ಗ್ರಾಮ ಪಂಚಾಯತ್ ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡುತ್ತಿದೆ. ಈ ವರ್ಷಾಂತ್ಯದ ಮೊದಲು ಗ್ರಾಮ ಪಂಚಾಯತ್ ಚುನಾವಣೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರ ಅಧಿಕಾರವಧಿಯು ಜೂನ್ನಲ್ಲೇ ಕೊನೆಗೊಂಡಿದೆ. ಆದರೆ, ಕೊರೊನಾ ಹಿನ್ನೆಲೆ ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ. ಸ್ಥಳೀಯ ಸಂಸ್ಥೆಗಳನ್ನು ನಡೆಸಲು ಸರ್ಕಾರ ಆಡಳಿತದಾರರನ್ನು ನೇಮಿಸಿದೆ. ಆದರೆ, ಆಡಳಿತಗಾರರನ್ನು ನೇಮಕ ಮಾಡಿದ ಆರು ತಿಂಗಳೊಳಗಾಗಿ ಚುನಾವಣೆ ನಡೆಸಬೇಕು. ಅಲ್ಲದೇ, ಚುನಾವಣೆ ನಡೆಸಲು ವಿಳಂಬವಾದ ಬಗ್ಗೆ ಹೈಕೋರ್ಟ್ಗೆ ಸಲ್ಲಿಸಿರುವ ಪಿಐಎಲ್ ಅರ್ಜಿ ಬಾಕಿ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಾಲೂಕು ಹಾಗೂ ಜಿಲ್ಲಾ ಪಂಚಾಯತ್ಗಳ ಅಧಿಕಾರವಧಿ ಮುಂದಿನ ವರ್ಷದ ಆರಂಭದಲ್ಲಿ ಕೊನೆಗೊಳ್ಳುತ್ತಿವೆ. ಅಲ್ಲದೇ, ಆ ಸ್ಥಾನಗಳಿಗೂ ಚುನಾವಣೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಅನೇಕ ಹೊಸ ತಾಲೂಕುಗಳನ್ನು ಕೂಡಾ ರಚಿಸಲಾಗಿದೆ. ಈ ಪಂಚಾಯತ್ಗಳಿಗೆ ಚುನಾವಣಾ ಆಯೋಗವು ಮೀಸಲಾತಿಯನ್ನು ನಿಗದಿ ಮಾಡಬೇಕಾಗಿದೆ. ಇವೆಲ್ಲದರೊಂದಿಗೆ ಬಿಬಿಎಂಪಿ ಚುನಾವಣೆಯೂ ನಡೆಯಬೇಕಾಗಿದೆ. 2021ರಲ್ಲಿ ಈ ಎಲ್ಲಾ ಚುನಾವಣೆಗಳನ್ನು ನಡೆಸಬೇಕಾಗಿರುವ ಕಾರಣ, ಇನ್ನು ಪಂಚಾಯತ್ ಚುನಾವಣೆಗಳನ್ನು ಮತ್ತಷ್ಟು ಮುಂದೂಡಲು ಸಾಧ್ಯವಿಲ್ಲ. ಅಲ್ಲದೇ, 2021ರ ಮೊದಲು ಚುನಾವಣೆ ನಡೆಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.