ಚಿತ್ರಕೂಟ, ಅ. 14 (DaijiworldNews/MB) : ಹತ್ರಸ್ ಪ್ರಕರಣದ ಬಳಿಕ ಹಲವು ಅತ್ಯಾಚಾರ, ದೌರ್ಜನ್ಯ ಪ್ರಕರಣದ ವಿಚಾರದಲ್ಲಿ ಬಾರೀ ಚರ್ಚೆಗೆ ಕಾರಣವಾಗಿರುವ ಉತ್ತರ ಪ್ರದೇಶ ರಾಜ್ಯದಲ್ಲಿ ಮತ್ತೊಂದು ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಮಾಣಿಕ್ಪುರದಲ್ಲಿ ಮೂವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಹದಿನೈದು ವರ್ಷದ ಬಾಲಕಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.
ಅಕ್ಟೋಬರ್ 8ರಂದು ಅರಣ್ಯ ಪ್ರದೇಶದಲ್ಲಿ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆರೋಪಿಗಳು ಆಕೆಯ ಕೈ ಕಾಲುಗಳನ್ನು ಕಟ್ಟಿದ್ದರು. ಪೊಲೀಸರೇ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಪೊಲೀಸರು ಆರೋಪಿಗಳ ವಿರುದ್ದ ಎಫ್ಐಆರ್ ದಾಖಲು ಮಾಡಿಲ್ಲ. ಈ ಕಾರಣದಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಬಾಲಕಿಯ ತಂದೆ ಆರೋಪ ಮಾಡಿದ್ದಾರೆ.
ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಪೊಲೀಸರು ಬಾಲಕಿ ಯಾವುದೇ ದೂರನ್ನು ನೀಡಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಆಕೆಗೆ ಅತ್ಯಾಚಾರವಾಗಿರುವುದು ದೃಢಪಟ್ಟಿಲ್ಲ. ಕೆಲವು ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಗ್ರಾಮದ ಮುಖಂಡ ಮಗ ಕಿಶನ್ ಉಪಾಧ್ಯಾಯ, ಆಶೀಶ್ ಮತ್ತು ಸತೀಶ್ ಎಂಬುವರ ವಿರುದ್ಧ ಐಪಿಸಿ ಮತ್ತು ಎಸ್.ಸಿ, ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.