ಅಲಹಾಬಾದ್, ಅ. 14 (DaijiworldNews/MB) : ರಾತ್ರೋರಾತ್ರಿ ಹತ್ರಸ್ ಸಾಮೂಹಿಕ ಅತ್ಯಾಚಾರ. ಹತ್ಯೆ ಸಂತ್ರಸ್ತೆಯ ಅಂತ್ಯ ಸಂಸ್ಕಾರ ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಈ ಪ್ರರಕಣಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕುಟುಂಬ ಸದಸ್ಯರಿಗೆ ಸಂತ್ರಸ್ತೆಯ ಪಾರ್ಥಿವ ಶರೀರವನ್ನು ಸ್ವಲ್ಪ ಕಾಲವೂ ಹಸ್ತಾಂತರ ಮಾಡದೇ ರಾತ್ರೋರಾತ್ರಿ ಪೊಲೀಸರೇ ಅಂತ್ಯಕ್ರಿಯೆ ಮಾಡಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಈ ರೀತಿ ಮಾಡಿರುವುದು ಸರಿಯಲ್ಲ ಎಂದು ನ್ಯಾ. ಪಂಕಜ್ ಮಿತ್ತಲ್ ಹಾಗೂ ನ್ಯಾ. ರಂಜನ್ ರಾಯ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಅಷ್ಟಕ್ಕೂ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರ ಮಾಡದಿರಲು ಯಾವುದೇ ಬಲವಾದ ಕಾರಣಗಳು ಇರುವುದು ನಮಗೆ ಕಾಣುತ್ತಿಲ್ಲ. ಅಂತ್ಯ ಸಂಸ್ಕಾರದಲ್ಲಿ ದಹನ ಕ್ರಿಯೆಯೂ ಒಂದು ಮುಖ್ಯ ಭಾಗ. ಕಾನೂನು ಸುವ್ಯವಸ್ಥೆಗಳ ನೆಪದಲ್ಲಿ ಅದನ್ನು ರಾಜೀ ಮಾಡಿಕೊಳ್ಳಲಾಗದು ಎಂದು ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.