ಬೆಂಗಳೂರು, ಅ. 14 (DaijiworldNews/PY): ಕೊರೊನಾ ಸೋಂಕಿಗೆ ಒಳಗಾಗಿರುವ ಮೂಡುಬಿದಿರೆ ಶಿರ್ತಾಡಿಯ ಶಿಕ್ಷಕಿ ಎನ್.ಪದ್ಮಾಕ್ಷಿ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ನೀಡಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ದ.ಕ ಜಿಲ್ಲಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರೊಂದಿಗೆ ದೂರವಾಣಿಯಲ್ಲಿ ಶಿಕ್ಷಕ ದಂಪತಿಗೆ ಕೊರೊನಾ ತಗುಲಿರುವ ಬಗ್ಗೆ ಚರ್ಚೆ ನಡೆಸಿದ್ದು, ಶಿಕ್ಷಕಿಗೆ ಉತ್ತಮ ಚಿಕಿತ್ಸೆ ನೀಡಲು ಸೂಕ್ತವಾದ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಶಿಕ್ಷಕಿ ಪದ್ಮಾವತಿ ಅವರ ಪುತ್ರಿ ಕುಮಾರಿ ಐಶ್ವರ್ಯಾಳನ್ನು ಸಂಪರ್ಕಿಸಿರುವ ದ.ಕ ಜಿಲ್ಲಾಧಿಕಾರಿ, ತಮ್ಮ ತಾಯಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ. ಈ ವಿಚಾರವಾಗಿ ಯಾವುದೇ ಭಯ ಬೇಡ ಎಂದಿದ್ದಾರೆ.
ಈ ವಿಚಾರದ ಬಗ್ಗೆ ಸಿಎಂ ಬಿಎಸ್ವೈ ಅವರೂ ಕೂಡಾ ದ.ಕ ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿದ್ದು, ಶಿಕ್ಷಕಿಯ ಚಿಕಿತ್ಸೆಗೆ ಅವಶ್ಯಕವಾದ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತನಾಡಿರುವ ದ.ಕ ಜಿಲ್ಲಾಧಿಕಾರಿ, ರೋಗಿಯ ಚಿಕಿತ್ಸಾ ಬಿಲ್ ಅನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿರುವುದನ್ನು ಶಿಕ್ಷಣ ಸಚಿವರು ಹೇಳಿದ್ದಾರೆ.