ನವದೆಹಲಿ, ಅ. 14 (DaijiworldNews/PY): ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವ ಕೆಲವು ಮಂದಿಯಲ್ಲಿ ಪುನಃ ಸೋಂಕು ವರದಿಯಾಗುತ್ತಿರುವುದು ಕಂಡು ಬಂದಿರುವ ಹಿನ್ನೆಲೆ ಐಸಿಎಂಆರ್ ವಿಸ್ತೃತವಾದ ಅಧ್ಯಯನ ಪ್ರಾರಂಭ ಮಾಡಿದೆ.
ಸಾಂದರ್ಭಿಕ ಚಿತ್ರ
ನಾವು ಮರು ಸೋಂಕು ಪ್ರಕರಣಗಳನ್ನು ಅಧ್ಯಯನ ಮಾಡುತ್ತಿದ್ದೇವೆ. ಅಂತಹ ಮೂರು ಪ್ರಕರಣಗಳು ವರದಿಯಾಗಿವೆ. ಮುಂಬೈನ ಇಬ್ಬರು ಹಾಗೂ ಅಹಮದಾಬಾದ್ನ ಒಂದು ಪ್ರಕರಣವಾಗಿದೆ. ಸೋಂಕಿನಿಂದ ಗುಣಮುಖರಾದ 110 ದಿನಗಳವರೆಗೆ ದೇಹದಲ್ಲಿ ಪ್ರತಿಕಾಯಗಳು ಇರುತ್ತವೆ. ಆದರೂ ನಾವು 100 ದಿನಗಳ ಅವಧಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಏಕೆಂದರೆ, ಅಲ್ಲಿಯವರಗೆ ಪ್ರತಿಕಾಯಗಳು ಇರುತ್ತದೆ ಎಂದು ಐಸಿಎಂಅರ್ ಪ್ರಧಾನ ನಿರ್ದೇಶಕ ಡಾ.ಬಲರಾಂ ಭಾರ್ಗವ ಹೇಳಿದ್ದಾರೆ.
ಲ್ಯಾನ್ಸೆಟ್ ನಿಯತಕಾಲಿಕೆಯು ಇತ್ತೀಚೆಗೆ ಮಾಡಿದ ವರದಿಯಲ್ಲಿ ಕೊರೊನಾ ರೋಗಿಗಳಲ್ಲಿ ಮರುಸೋಂಕು ಕಾಣಿಸಿಕೊಳ್ಳಬಹುದು ಎಂದಿತ್ತು. ಅಲ್ಲದೇ, ಮರುಸೋಂಕು ಕಾಣಿಸಿಕೊಂಡವರಲ್ಲಿ ರೋಗ ಲಕ್ಷಣಗಳು ಹೆಚ್ಚು ತೀವ್ರವಾಗಿರುತ್ತದೆ ಎಂದು ತಿಳಿಸಿತ್ತು.
ವಿಶ್ವ ಆರೋಗ್ಯ ಸಂಸ್ಥೆಯು ಸುಮಾರು 24 ಮರುಸೋಂಕು ಪ್ರಕರಣಗಳನ್ನು ದಾಖಲಿಸಿದೆ. ಮೂರು ಮರುಸೋಂಕು ಪ್ರಕರಣಗಳನ್ನು ದಾಖಲಿಸಿದ್ದೇವೆ. ಅಲ್ಲದೇ, ರೋಗಿಗಳನ್ನು ದೂರವಾಣಿ ಮೂಲಕವು ಸಂಪರ್ಕಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೊರೊನಾಕ್ಕೆ ಕಾರಣವಾಗುವ ಎಸ್ಎಆರ್ಎಸ್ ಕೋವ್-2 ವೈರಾಣುಗಳು ರೂಪಾಂತರಗೊಳ್ಳುತ್ತಿರುವುದು ಕಂಡಬಂದರೂ, ಬದಲಾವಣೆಗಳ ನಗಣ್ಯ ಎಂದು ಹೇಳಿದ್ದಾರೆ.