ಹೈದರಾಬಾದ್, ಅ. 15 (DaijiworldNews/MB) : ಹೈದರಾಬಾದ್ ಮತ್ತು ತೆಲಂಗಾಣದಲ್ಲಿ ಸತತ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಲಿದ್ದು ಮಳೆಯ ಅಬ್ಬರದಿಂದ ಸಾವನ್ನಪ್ಪಿದವರ ಸಂಖ್ಯೆ 32ಕ್ಕೇರಿದೆ. ಹೈದರಾಬಾದ್ನಲ್ಲಿಯೇ 25 ಮಂದಿ, ಮಹಬೂಬ್ ನಗರ ಜಿಲ್ಲೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ.
ಹೈದರಾಬಾದ್ ಮತ್ತು ತೆಲಂಗಾಣ ಸುತ್ತಮುತ್ತ ಜನಜೀವನ ಅಸ್ತವ್ಯಸ್ತವಾಗಿದ್ದು, ತೀವ್ರ ಮಳೆಗೆ ಮನೆಗಳ ಗೋಡೆ ಕುಸಿದು, ವಿದ್ಯುತ್ ಪ್ರವಹಿಸಿ ಮತ್ತು ಕಾಲುವೆಗಳಲ್ಲಿ ಕೊಚ್ಚಿಹೋಗಿದೆ. ಗಂಗನ್ ಪಹಾಡ್ನಲ್ಲಿ ಮೂವರು ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ಹೈದರಾಬಾದ್ನ ಹೊರವಲಯಗಳಲ್ಲಿ 9 ಮಂದಿ ಕಾಣೆಯಾಗಿದ್ದಾರೆ. ಮೈಲಾರ್ದೇವಪಲ್ಲಿಯಲ್ಲಿ ಇಬ್ಬರು ಕಾಣೆಯಾಗಿದ್ದಾರೆ.
ಚಂದ್ರಯಾನಗುಟ್ಟದಲ್ಲಿ ಕಳೆದ ಮಂಗಳವಾರ ರಾತ್ರಿ ಬಂಡೆಯೊಂದು ಮನೆಗೆ ಬಿದ್ದು ಗೋಡೆ ಕುಸಿದುಬಿದ್ದು 8 ಮಂದಿ ಮೃತಪಟ್ಟಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ರಕ್ಷಣಾ, ಪರಿಹಾರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಆಡಳಿತಾಧಿಕಾರಿಗಳಿಗೆ ಸೂಚಿಸಿದ್ದಾರೆ.