ಬೆಂಗಳೂರು, ಅ.15 (DaijiworldNews/HR): ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್. ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಗಾವಲು ಕಾರಿನ ಚಾಲಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ಅವರ ವಿರುದ್ಧ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಕುರಿತು ದೂರು ನೀಡಿರುವ ಕಾಟನ್ಪೇಟೆಯ ಎಎಸ್ಐ ನಾಗರಾಜ್, ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಂಬಂಧ ಬಂದೋಬಸ್ತ್ ಕರ್ತವ್ಯಕ್ಕೆ ನೇಮಿಸಲಾಗಿದ್ದು, ಅಲ್ಲಿನ ಪಾಲಿಕೆ ಕಚೇರಿಯ 100 ಮೀಟರ್ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಹಾಕಿ, ಯಾರನ್ನೂ ಒಳಬಿಡದಂತೆ ಸೂಚಿಸಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಮತ್ತು ಸಿದ್ದರಾಮಯ್ಯ ಅವರ ಬೆಂಬಲಿಗರೊಂದಿಗೆ ಬ್ಯಾರಿಕೇಡ್ನಿಂದ ಒಳಬರಲು ಯತ್ನಿಸಿದರು.
ಬಳಿಕ ಪೊಲೀಸರು ಅವರನ್ನು ತಡೆದರೂ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನದ ಪೊಲೀಸರು ಬ್ಯಾರಿಕೇಡ್ ಸರಿಸಿ, ವಾಹನಗಳನ್ನು ಪಾಲಿಕೆ ಕಚೇರಿ ಮುಂಭಾಗಕ್ಕೆ ತಂದಿದ್ದಾರೆ ಎಂದು ಎಎಸ್ಐ ನಾಗರಾಜ್ ಅವರು ದೂರಿನಲ್ಲಿ ಉಲ್ಲೇಖಿಸಲಾಗಿದೆ.