ಆಗ್ರಾ,ಅ.15 (DaijiworldNews/HR): ಉತ್ತರ ಪ್ರದೇಶದ ಹತ್ರಸ್ ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಸಂತ್ರಸ್ತೆಯನ್ನು ಮೊದಲು ದಾಖಲಿಸಿದ್ದ ಈ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ ಮಾಯವಾಗಿರುವುದು ಸಿಬಿಐ ತನಿಖಾ ತಂಡಕ್ಕೆ ತಿಳಿದುಬಂದಿದೆ.
ಯುವತಿಯನ್ನು ಆಸ್ಪತ್ರೆಗೆ ಕರೆತಂದ ಸಿಸಿಟಿವಿ ದೃಶ್ಯಾವಳಿಯ ಬ್ಯಾಕ್ ಅಪ್ ಲಭ್ಯ ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ತಿಳಿದು ಬಂದಿದೆ.
ಜಿಲ್ಲಾಡಳಿತ ಮತ್ತು ಪೊಲೀಸರು ಆ ದಿನದ ದೃಶ್ಯಾವಳಿಯನ್ನು ಕೇಳಿರಲಿಲ್ಲ. ಇದೀಗ ಒಂದು ತಿಂಗಳ ಬಳಿಕ ನಾವು ಅದನ್ನು ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಇಂದ್ರವೀರ್ ಸಿಂಗ್ ಹೇಳಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ವ್ಯವಸ್ಥೆಯಲ್ಲಿ ಹಿಂದಿನ ಏಳು ದಿನಗಳ ದೃಶ್ಯಾವಳಿಗಳು ಡಿಲೀಟ್ ಆಗಿ ಹೊಸ ದೃಶ್ಯಾವಳಿಗಳು ದಾಖಲೀಕರಣಗೊಳ್ಳುತ್ತವೆ ಎಂಬುದಾಗಿ ವಿವರಿಸಿದ್ದಾರೆ.
ಇನ್ನು ಈ ಮೊದಲು ಜಿಲ್ಲಾಡಳಿತ ಹಾಗೂ ಪೊಲೀಸರು ಏಕೆ ಸಿಸಿಟಿವಿ ದೃಶ್ಯಾವಳಿ ಕೇಳಿರಲಿಲ್ಲ ಎಂದು ಪ್ರಶ್ನಿಸಿದಾಗ, ಅಪರಾಧ ಸಂಬಂಧಿ ತನಿಖೆಯಲ್ಲಿ ಆಸ್ಪತ್ರೆಯ ಪಾತ್ರ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ಉತ್ತರಿಸಿದರು.