ಮುಂಬೈ, ಅ. 15 (DaijiworldNews/PY): ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೆಂಕಿ ಹತ್ತಿಕೊಂಡ ಪರಿಣಮ ಎನ್ಸಿಪಿ ಮುಖಂಡರೋರ್ವರು ಜೀವಂತ ದಹನವಾಗಿರುವ ಘಟನೆ ಮುಂಬೈನ ನಾಸಿಕ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಎನ್ಸಿಪಿ ಮುಖಂಡ ಸಂಜಯ್ ಶಿಂದೆ( 55) ಎನ್ನಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಪಿಂಪಾಲ್ ಗಾಂವ್ ಬಸ್ವಂತ್ ಟೋಲ್ ಪ್ಲಾಝಾ ಬಳಿ ಈ ಘಟನೆ ನಡೆದಿದೆ. ಇವರು ಕೀಟನಾಶಕ ಖರೀದಿ ಮಾಡಿ ಹಿಂದಿರುಗುತ್ತಿದ್ದ ಸಂದರ್ಭ ಮುಂಬೈ ಆಗದರಾದ ಪಿಂಪಾಲ್ ಗಾಂವ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಈ ಘಟನೆ ಸಂಭವಿಸಿದೆ ಎಂದಿದ್ದಾರೆ.
ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ ಶಿಂದೆ ಅವರು ಕಾರನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಅಲ್ಲದೇ, ಅವರು ಕಾರಿನಿಂದ ಹೊರಬರಲು ನೋಡಿದ್ದು, ಈ ವೇಳೆ ಕಾರ್ನ ಬಾಗಿಲು ಲಾಕ್ ಆಗಿತ್ತು. ಅವರು ಗಾಜನ್ನು ಒಡೆದು ಹೊರಕ್ಕೆ ಬರಲು ಹರಸಾಹಸ ಪಟ್ಟಿದ್ದು, ಅದೂ ವ್ಯರ್ಥವಾಗಿದೆ. ಕಾರಿನ ಒಳಗಿನಿಂದ ಬೆಂಕಿ ಆವರಿಸಿಕೊಂಡಿದ್ದ ಕಾರಣ ಶಿಂದೆ ಅವರು ಜೀವಂತವಾಗಿ ದಹನವಾಗಿದ್ದಾರೆ ಎಂದು ಪೊಲೀಸ್ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಕಾರಿನೊಳಗೆ ಸ್ಯಾನಿಟೈಸರ್ ಬಾಟಲ್ ಪತ್ತೆಯಾಗಿದ್ದು, ಇದೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ, ಬಳಿಕ ಶಿಂದೆ ಅವರನ್ನು ಕಾರಿನಿಂದ ಹೊರತೆಗೆಯಲಾಯಿತು. ಆದರೆ, ಅವರು ಅಷ್ಟರಲ್ಲೇ ಮೃತಪಟ್ಟಿದ್ದರು.
ಘಟನೆಯ ಬಗ್ಗೆ ಪಿಂಪಾಲ್ ಗಾಂವ್ ಬಸ್ವಾಂತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.