ಬೆಂಗಳೂರು, ಅ. 15 (DaijiworldNews/MB) : ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್. ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಗಾವಲು ಕಾರಿನ ಚಾಲಕನ ವಿರುದ್ದ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ''ಇದು ನೀಚ ರಾಜಕಾರಣ, ಹೇಡಿತನದ ರಾಜಕಾರಣ, ಅಧಿಕಾರದ ದುರ್ಬಳಕೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ'' ಎಂದು ದೂರಿದ್ದಾರೆ.
ಗುರುವಾರ ಬೆಳಿಗ್ಗೆ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ತುರ್ತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ''ಆರ್ಆರ್ ನಗರದ ಅಭ್ಯರ್ಥಿ ಕುಸುಮಾ ವಿರುದ್ದ ಎಫ್ಐಆರ್ ದಾಖಲಿಸಿದ್ದು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ. ಇದು ಚುನಾವಣೆಗೆ ಅಡ್ಡಿಪಡಿಸುವ ಯತ್ನ. ರಾಜ್ಯ ಸರ್ಕಾರದ ಈ ನಡೆ ಖಂಡನಾರ್ಹ'' ಎಂದು ಹೇಳಿದ್ದಾರೆ.
''ನಾವು ಸಮಯಕ್ಕೆ ಸರಿಯಾಗಿ ನಾಮಪತ್ರ ಸಲ್ಲಿಸಿದ್ದು ಈ ಕ್ರಮದ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸ್ಪಷ್ಟನೆ ನೀಡಬೇಕು. ಎಫ್ಐಆರ್ ದಾಖಲಿಸಿದ ಇನ್ಸ್ಪೆಕ್ಟರ್ನ್ನು ಅಮಾನತು ಮಾಡಬೇಕು'' ಎಂದು ಒತ್ತಾಯಿಸಿದರು.
''ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ 100 ಮೀಟರ್ ಒಳಗೆ ಸಚಿವರು, ಶಾಸಕರೂ ಇದ್ದರು. ಅವರೆಲ್ಲರ ಮೇಲೆ ಕೇಸ್ ದಾಖಲು ಮಾಡಿ. ಒಬ್ಬರಿಗೆ ಒಂದೊಂದು ಕಾನೂನಾ'' ಎಂದು ಪ್ರಶ್ನಿಸಿದರು.
''ಈ ಉಪಚುನಾವಣಾ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಬೆದರಿಕೆ ಹಾಕುತ್ತಿದ್ದು ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು'' ಎಂದು ತಿಳಿಸಿರುವ ಅವರು, ''ಇದು ಹೇಡಿತನದ ರಾಜಕಾರಣ. ಕಾಂಗ್ರೆಸ್ ಇದಕ್ಕೆಲ್ಲಾ ಭಯ ಪಡಲ್ಲ. ತಾಕತ್ತಿದ್ದರೆ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಿಸಿ'' ಎಂದು ಸವಾಲು ಎಸೆದಿದ್ದಾರೆ.