ನವದೆಹಲಿ, ಅ. 15 (DaijiworldNews/MB) : ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ 89ನೇ ಜನ್ಮ ದಿನಾಚರಣೆಯ ಗುರುವಾರವಾಗಿದ್ದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಉಪರಾಷ್ಟ್ರಪತಿ ಸಚಿವಾಲಯ, ''ಕನಸುಗಳು ಆಲೋಚನೆಗಳಾಗಿ ರೂಪಾಂತರಗೊಳ್ಳುತ್ತವೆ ಮತ್ತು ಆಲೋಚನೆಗಳು ಕ್ರಿಯೆಗೆ ಕಾರಣವಾಗುತ್ತವೆ'' ಎಂಬ ಡಾ ಎಪಿಜೆ ಅಬ್ದುಲ್ ಕಲಾಂ ಅವರ ನುಡಿಯನ್ನು ನೆನಪಿಸಿಕೊಂಡಿದ್ದು, ''ಇಂದು ಕಲಾಂ ಅವರ ಜನ್ಮ ದಿನಾಚರಣೆಯಂದು 'ಪೀಪಲ್ಸ್ ಪ್ರೆಸಿಡೆಂಟ್' ಡಾ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ನನ್ನ ವಿನಮ್ರ ಗೌರವ ಸಲ್ಲಿಸುತ್ತೇನೆ. ಅವರು ಸರಳತೆ ಮತ್ತು ಜ್ಞಾನದ ಪ್ರತೀಕ'' ಎಂದು ಹೇಳಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ''ಡಾ. ಕಲಾಂ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ವಿಜ್ಞಾನಿಯಾಗಿ ಮತ್ತು ಭಾರತದ ರಾಷ್ಟ್ರಪತಿಯಾಗಿ ಅವರು ರಾಷ್ಟ್ರೀಯ ಅಭಿವೃದ್ಧಿಗೆ ನೀಡಿದ ಅಳಿಸಲಾಗದ ಕೊಡುಗೆಯನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಜೀವನ ಪಯಣ ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತದೆ'' ಎಂದಿದ್ದು ಕಲಾಂ ಅವರ ಜೀವನದ ಕುರಿತಾದ ವಿಡಿಯೋದ ತುಣುಕೊಂದನ್ನು ಉಲ್ಲೇಖಿಸಿದ್ದಾರೆ.
ತಮಿಳುನಾಡಿನ ರಾಮೇಶ್ವರಂನಲ್ಲಿ 1931 ರಲ್ಲಿ ಜನಿಸಿದ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಭವನದಲ್ಲಿ ಜನಸಾಮಾನ್ಯರಿಗೆ ಪ್ರವೇಶಕ್ಕೆ ಅವಕಾಶ ನೀಡುವ ಮೂಲ ಜನರ ರಾಷ್ಟ್ರಪತಿ ಎನಿಸಿಕೊಂಡರು. ಅವರು ಭಾರತದಲ್ಲಿ . ಕ್ಷಿಪಣಿ ಅಭಿವೃದ್ದಿಗಾಗಿ ನೀಡಿದ ಕೊಡುಗೆಗಾಗಿ ಅವರನ್ನು ‘ಭಾರತದ ಕ್ಷಿಪಣಿ ಪಿತಾಮಹ ಎಂದು ಕರೆಯಲಾಗುತ್ತದೆ. 2015ರಲ್ಲಿ ಕಲಾಂ ಅವರು ನಿಧನರಾದರು.