ಪಾಣಿಪತ್ , ಅ.15 (DaijiworldNews/HR): ಕಳೆದ ಒಂದು ವರ್ಷದಿಂದ ತನ್ನ ಪತಿಯಿಂದ ಶೌಚಾಲಯದಲ್ಲಿ ಬಂಧಿಯಾಗಿದ್ದ ಮಹಿಳೆಯೊಬ್ಬರನ್ನು ಅಧಿಕಾರಿಗಳು ರಕ್ಷಿಸಿದ ಘಟನೆ ಹರ್ಯಾಣಾದ ಪಾಣಿಪತ್ ಜಿಲ್ಲೆಯ ರಿಷ್ಪುರ್ ಎಂಬ ಗ್ರಾಮದಲ್ಲಿ ನಡೆದಿದೆ.
ಈ ರಕ್ಷಣಾ ಕಾರ್ಯಾಚರಣೆಯ ನೇತೃತ್ವವನ್ನು ಮಹಿಳಾ ರಕ್ಷಣೆ ಮತ್ತು ಬಾಲ್ಯವಿವಾಹ ತಡೆ ಅಧಿಕಾರಿ ರಜನಿ ಗುಪ್ತಾ ವಹಿಸಿದ್ದರು.
ಈ ಕುರಿತು ಮಾಹಿತಿ ನೀಡಿರುವ ರಜನಿ ಗುಪ್ತಾ, ಆ ಮಹಿಳೆಯು ಹೊರನೋಟಕ್ಕೆ ಅಸ್ವಸ್ಥವಾದಂತೆ ಕಾಣುತ್ತಿಲ್ಲ, ಆದರೆ ಆಕೆ ಹಲವಾರು ದಿನಗಳಿಂದ ಏನನ್ನೂ ತಿಂದಿಲ್ಲ ಎಂದು ಕಾಣಿಸುತ್ತದೆ ಎಂಬುದಾಗಿ ಹೇಳಿದ್ದಾರೆ.
ಮಹಿಳೆಯ ಮಾನಸಿಕ ಅಸ್ಥಿರತೆ ಸಮಸ್ಯೆ ಎದುರಿಸುತ್ತಿದ್ದು, ಆಕೆಯನ್ನು ಹಲವಾರು ವೈದ್ಯರ ಬಳಿ ಕರೆದುಕೊಂಡು ಹೋದರೂ ಸ್ಥಿತಿ ಸುಧಾರಿಸಿರಲಿಲ್ಲ. ಹೊರಗೆ ಕುಳಿತುಕೊಳ್ಳಲು ಹೇಳಿದರೂ ಆಕೆ ಅಲ್ಲಿ ಕುಳಿತುಕೊಳ್ಳುವುದಿಲ್ಲ ಎಂಬುದಾಗಿ ಮಹಿಳೆಯ ಪತಿ ಹೇಳಿಕೊಂಡಿದ್ದಾನೆ.
ಇನ್ನು ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಈ ಕುರಿತು ದೂರು ಕೂಡ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.