ನವದೆಹಲಿ, ಅ. 15 (DaijiworldNews/MB) : ಎಲ್ಲಾ ಸಚಿವಾಲಯಗಳು, ಸಾರ್ವಜನಿಕ ಇಲಾಖೆ ಮತ್ತು ಸಾರ್ವಜನಿಕ ಸೇವೆಗಳ ಘಟಕಗಳಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್(ಎಂಟಿಎನ್ಎಲ್) ಸೇವೆಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ದೂರಸಂಪರ್ಕ ಇಲಾಖೆ ಆದೇಶ ಹೊರಡಿಸಿದೆ.
ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿದ ಕೇಂದ್ರ ದೂರಸಂಪರ್ಕ ಸಚಿವಾಲಯವು ಎಲ್ಲಾ ಸಚಿವಾಲಯಗಳು ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಿಗೆ ಈ ಆದೇಶ ಹೊರಡಿಸಿದೆ.
೨೦೧೯ - ೨೦ ರ ಹಣಕಾಸು ವರ್ಷದಲ್ಲಿ ಬಿಎಸ್ಎನ್ಎಲ್ಗೆ 15 ಸಾವಿರದ 500 ಕೋಟಿ ರೂಪಾಯಿ ಹಾಗೂ ಎಂಟಿಎನ್ಎಲ್ಗೆ 3 ಸಾವಿರದ 694 ಕೋಟಿ ರೂಪಾಯಿಗಳ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಈ ಎರಡು ಸೇವೆಗಳ ಬಳಕೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ಬಿಎಸ್ಎನ್ಎಲ್ ವೈರ್ಲೈನ್ ಗ್ರಾಹಕರ ಸಂಖ್ಯೆಯು ನವೆಂಬರ್ 2008ರಲ್ಲಿ 2.9 ಕೋಟಿ ಇದ್ದು ಇದೀಗ 80 ಲಕ್ಷಕ್ಕೆ ಕುಸಿದಿದೆ. 2008ರ ನವೆಂಬರ್ನಲ್ಲಿ ಎಂಟಿಎನ್ಎಲ್ನಲ್ಲಿ 35.4 ಲಕ್ಷ ಗ್ರಾಹಕರು ಇದ್ದು ಈಗ 30.7 ಲಕ್ಷಕ್ಕೆ ಕುಸಿದಿದೆ.