ಬೆಂಗಳೂರು, ಅ. 15 (DaijiworldNews/MB) : ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದ ಗಲಭೆಕೋರನಾದ ಮುದಾಸೀರ್ ಅಲಿಯಾಸ್ ಮಜ್ಜು ಎಂಬಾತ, ''ಕಾಂಗ್ರೆಸ್ ಶಾಸಕ ಅಂಖಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧರಾಗಿರಿ ಎಂದು ತಿಳಿಸಿದ್ದೆವು'' ಎಂದು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಗಲಭೆಯ ಹಿಂದಿನ ಪಿತೂರಿ ಮತ್ತು ಯೋಜನೆಯನ್ನು ಕಾರ್ಯಗತಗೊಳಿಸಿದ ರೀತಿಯ ಬಗ್ಗೆ ಮುದಾಸೀರ್ ತಿಳಿಸಿದ್ದಾನೆ ಎಂದು ಹೇಳಲಾಗಿದೆ. "ಆಗಸ್ಟ್ 11 ರ ರಾತ್ರಿ, ಸಂಜೆ 7.15 ರ ಸುಮಾರಿಗೆ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ನವೀನ್ ಅವರು ಪ್ರವಾದಿ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದು ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಅವರ ವಿರುದ್ದ ಮುಸ್ಲಿಂ ಸಮುದಾಯ ಒಟ್ಟುಗೂಡುವಂತೆ ಸಂಪತ್ ರಾಜ್ ಅವರ ವಿಶ್ವಾಸಾರ್ಹರಾದ ಸಂತೋಷ್ ಕುಮಾರ್ ಅವರಿಂದ ನನಗೆ ಕರೆ ಬಂತು. ಶಾಸಕ ಅಖಂಡ ಶ್ರೀನಿವಾಸ ಅವರಿಗೆ ಪಾಠ ಕಲಿಸಲು ಶಾಸಕರ ಮನೆ ಮತ್ತು ಕಚೇರಿಯನ್ನು ನಾಶಮಾಡಲು ಅವರು ನನಗೆ ಹೇಳಿದರು'' ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ಸಂಪತ್ ರಾಜ್ ಅವರ ವಿಶ್ವಾಸಾರ್ಹರಾದ ಸಂತೋಷ್ ಕುಮಾರ್ ಅವರು ನೀಡಿದ ಸಲಹೆಯಂತೆ ಮುದಾಸಿರ್, ''ಕೆಲವು ಯುವಕರನ್ನು ಒಟ್ಟುಗೂಡಿಸಿ ಅವರನ್ನು ನವೀನ್ ಅವರ ಮನೆಗೆ ಕರೆದೊಯ್ದು ಅಲ್ಲಿ ಗಲಭೆ ನಡೆಸಲಾಗಿದ್ದು ಇದರೊಂದಿಗೆ ಕೆಲವು ಎಸ್ಡಿಪಿಐ ಕಾರ್ಯಕರ್ತರು ಕೈಜೋಡಿಸಿದರು'' ಎಂದು ಅವರು ಹೇಳಿದ್ದಾರೆ.
ಶಾಸಕರ ಮನೆಗೆ ನುಗ್ಗಿದ ದುಷ್ಕರ್ಮಿಗಳು ನಗದು, ಆಭರಣಗಳನ್ನು ದೋಚಿದ್ದರು. ಗಲಭೆಯ ಸಂದರ್ಭದಲ್ಲಿ ಸುಮಾರು 11.5 ಲಕ್ಷ ರೂ. ನಗದು, 50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು, ಕಂಪ್ಯೂಟರ್ ಮತ್ತು ಇತರ ವಸ್ತುಗಳನ್ನು ದೋಚಲಾಗಿದೆ ಎಂದು ಸಿಸಿಬಿ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.