ಮುಂಬೈ, ಅ. 15 (DaijiworldNews/MB) : ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ಪಿ) ಹಗರಣ ಹಿನ್ನೆಲೆಯಲ್ಲಿ ದೇಶಾದ್ಯಂತ ಸುದ್ದಿ ವಾಹಿನಿಗಳ ವಾರದ ರೇಟಿಂಗ್ಸ್ನ್ನು ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಿಎಆರ್ಸಿ) ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಇನ್ನು 12 ವಾರಗಳವರೆಗೆ ಸಾಪ್ತಾಹಿಕ ರೇಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ಸುದ್ದಿವಾಹಿನಿಗಳ ರೇಟಿಂಗ್ಗಳ ಪಾರದರ್ಶಕತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೂಡಾ ಬಿಎಆರ್ಸಿ ತಿಳಿಸಿದೆ.
ಟಿಆರ್ಪಿ ಹಗರಣಕ್ಕೆ ಸಂಬಂಧಿಸಿ 5 ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದು ಪೊಲೀಸರು ಅರ್ನಬ್ ಗೋಸ್ವಾಮಿಯವರ ರಿಪಬ್ಲಿಕ್ ಟಿವಿ ಎಕ್ಸಿಕ್ಯೂಟಿವ್ಗಳನ್ನು ಕೂಡಾ ವಿಚಾರಣೆ ನಡೆಸುತ್ತಿದ್ದಾರೆ.
ಆದರೆ ರಿಪಬ್ಲಿಕ್ ಟಿವಿ ತಮ್ಮಿಂದ ಯಾವುದೇ ಹಗರಣ ನಡೆದಿಲ್ಲ ಎಂದು ಹೇಳಿದ್ದು ಸುಪ್ರೀಂ ಮೆಟ್ಟಿಲೇರಿತ್ತು. ಇನ್ನು ಇಂದು ಈ ಅರ್ಜಿಯ ವಿಚಾರಣೆ ಸುಪ್ರೀಂ ನ್ಯಾಯಾಪೀಠಕ್ಕೆ ಬಂದಾಗ ನ್ಯಾಯಾಪೀಠವು ರಿಪಬ್ಲಿಕ್ ಟಿ.ವಿ. ಗೆ ನಿಮ್ಮ ಕಚೇರಿ ಮುಂಬೈ ವರ್ಲಿಯಲ್ಲಿದೆ. ವರ್ಲಿಯಿಂದ ಫ್ಲೋರಾ ಫೌಂಟೇನ್ (ಬಾಂಬೆ ಹೈಕೋರ್ಟ್ ಇರುವ ಸ್ಥಳ) ಸಮೀಪದಲ್ಲಿದೆ. ಹಾಗಿರುವಾಗ ನಿಮಗೆ ಮೊದಲು ಹೈಕೋರ್ಟ್ ಮೇಲೆ ನಂಬಿಕೆ ಇರಬೇಕು. ಸುಪ್ರೀಂ ಮೆಟ್ಟಿಲೇರುವ ಮೊದಲು ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಬೇಕು ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.