ಬೆಂಗಳೂರು,ಅ.15 (DaijiworldNews/HR): ಬಿಜೆಪಿಗೆ ಯಾವುದೇ ಅಭ್ಯರ್ಥಿ ವಿರುದ್ಧ ಪೊಲೀಸ್ ಕೇಸು ದಾಖಲಿಸಿ ರಾಜಕಾರಣ ಮಾಡುವ ಅನಿವಾರ್ಯತೆ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಸುಧಾಕರ್ ಸ್ವಾಸ್ತವವಾಗಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಈಗಾಗಲೇ ಗೆದ್ದಾಗಿದೆ. ಅವರು ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅನೇಕ ಸಾಧನೆಯೇ ಅವರಿಗೆ ಹಿಂದಿಗಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ತಂದುಕೊಡಲಿದೆ. ಹಾಗಾಗಿ ನಮಗೆ ಕೇಸು ದಾಖಲಿಸಿ ರಾಜಕಾರಣ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಇನ್ನು ಜನರ ದಾರಿತಪ್ಪಿಸಿ ಮತ ಹಾಕಿಸಿಕೊಳ್ಳಲು ಇದು ಕನಕಪುರ ಅಲ್ಲ. ಇಲ್ಲಿರುವ ಪ್ರಜ್ಞಾವಂತ ಮತದಾರರು ಅಭಿವೃದ್ಧಿ ಪರವಾಗಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೆಂಬಲಿಸಲಿದ್ದಾರೆ ಎಂದರು
ಪಾಲಿಕೆ ಚುನಾವಣೆಯಲ್ಲಿ ಕೂಡ ಬಿಜೆಪಿ ಪಕ್ಷ ಗೆಲುವು ಸಾಧಿಸಿ ಅಧಿಕಾರ ಹಿಡಿಯುವುದು ನಿಶ್ಚಿತ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರಗಳು ಕೈಗೊಂಡಿರುವ ಜನಪರ ಕಾರ್ಯಕ್ರಮಗಳು ಮತದಾರರ ಮನ ಗೆದ್ದಿವೆ ಎಂದು ಹೇಳಿದ್ದಾರೆ.